ಹುಣಸೂರು: ಮಂಗಳಮುಖಿಯೋರ್ವರು ಟಾರ್ಚರ್ ನೀಡುತ್ತಾ ಇದ್ದರು ಎಂಬ ಆರೋಪದ ಮೇರೆಗೆ ಅಪ್ರಾಪ್ತ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಹೆಜ್ಜೂರು ಗ್ರಾಮದಲ್ಲಿ ನಡೆದಿದೆ.
17 ವರ್ಷದ ರಾಹುಲ್ ಮೌರ್ಯ ಎಂಬಾತನೇ ಆತ್ಮಹತ್ಯೆಗೆ ಶರಣಾದ ಬಾಲಕನಾಗಿದ್ದಾನೆ. ಕಳೆದ ಒಂದು ವರ್ಷದಿಂದಲೂ ಮಂಗಳಮುಖಿ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಮೌರ್ಯ, ಕಳೆದ ನಾಲ್ಕು ತಿಂಗಳಿನಿಂದ ಇದ್ದಕ್ಕಿದ್ದಂತೆ ಮನೆಯಿಂದ ನಾಪತ್ತೆಯಾಗಿದ್ದನು.
ಪೋಷಕರು ನನ್ನ ಮಗ ಕಾಣೆಯಾಗಿದ್ದಾನೆ ಎಂದು ಭಾವಿಸಿ ಎಲ್ಲಾ ಕಡೆ ಹುಡುಕಿದ್ದರು. ಆದರೆ ಆತ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಬಳಿಕ ಇದೇ ಜೂನ್.23ರಂದು ಮನೆಗೆ ವಾಪಸ್ಸು ಬಂದ ಮೌರ್ಯ ಪೋಷಕರೊಂದಿಗೆ ಗಲಾಟೆ ಮಾಡಿದ್ದನು.
ಬಳಿಕ ಮನನೊಂದು ಮೌರ್ಯ ಆತ್ಮಹತ್ಯೆಗೆ ಶರಣಾಗಿದ್ದು, ಮೃತನ ಪೋಷಕರು ಮಂಗಳಮುಖಿಯ ಮೇಲೆ ಆರೋಪ ಮಾಡಿದ್ದಾರೆ. ನನ್ನ ಮಗ ಯಾವುದೇ ಕಾರಣಕ್ಕೂ ಈ ರೀತಿ ಆತ್ಮಹತ್ಯೆಗೆ ಶರಣಾಗುವವನಲ್ಲ. ಮಂಗಳಮುಖಿ ನನ್ನ ಮಗನ ತಲೆಕೆಡಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.





