ಮೈಸೂರು: ಮೈಸೂರಿನ ವರಕೋಡು ಎಂಬ ಹಳ್ಳಿಯಲ್ಲಿ ಹುಲಿ ಸಂಚಾರ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.
ಕಳೆದ ಆರು ದಿನಗಳ ಹಿಂದೆ ಅಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಬಳಿ ಹುಲಿ ಸಂಚರಿಸಿ ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಕಳೆದ ತಡರಾತ್ರಿ ಮತ್ತೆ ಹುಲಿ ಕಾಣಿಸಿಕೊಂಡಿದ್ದು, ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ.
ವರಕೋಡು ಅರಣ್ಯ ಪ್ರದೇಶದಲ್ಲಿ ಹುಲಿ ಇರುವಿಕೆಯನ್ನು ಖಾತ್ರಿ ಪಡಿಸಿಕೊಂಡು ಹುಲಿ ಸೆರೆಗಾಗಿ ಹೆಚ್ಚುವರಿ ಹುಲಿ ಬೋನುಗಳನ್ನು ಅಳವಡಿಸಲಾಗಿದೆ.
ಕಾರ್ಯಾಚರಣೆಗೆ ಸಿಬ್ಬಂದಿಗಳ ತಂಡಗಳನ್ನು ನಿಯೋಜಿಸಿ ನೈಟ್ ವಿಷನ್ ಕ್ಯಾಮರಾ, ಟ್ರ್ಯಾಪ್ ಕ್ಯಾಮರಾ ಅಳವಡಿಸಿ ಹುಲಿ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ.
ಕಾಡಂಚಿನಲ್ಲಿ ಇರುವ ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಜನರಿಗೆ ಯಾವುದೇ ತೊಂದರೆಯಾಗದಂತೆ ತಡೆಗಟ್ಟಲು ವಿಶೇಷ ತಂಡವನ್ನು ರಚಿಸಿ ವಾಹನದೊಂದಿಗೆ ಗಸ್ತು ಮಾಡಿಸಲಾಗುತ್ತಿದೆ.
ಅರಣ್ಯದ ಒಳಗಡೆ ಹಾದುಹೋಗುವ ರಸ್ತೆಗಳಲ್ಲಿ ಜನರ ಸಂಚಾರ ನಿರ್ಬಂಧ ಮುಂದುವರಿಸಲಾಗಿದ್ದು, ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಹುಲಿಯನ್ನು ಆದಷ್ಟು ಬೇಗ ಸೆರೆ ಹಿಡಿಯುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಧೈರ್ಯ ಹೇಳಿದ್ದಾರೆ.





