ಮೈಸೂರು: ಸಾಮಾನ್ಯವಾಗಿ ಮೈಸೂರು ಸುತ್ತಮುತ್ತಲಿನ ತಾಲೂಕು ಹೋಬಳಿಗಳಲ್ಲಿ ಚಿರತೆ ಕಾಟ ಹೆಚ್ಚಾಗಿ ಕಂಡು ಬರುತ್ತದೆ. ಆದರೆ ಇದೀಗ ಹುಲಿರಾಯ ಕಾಡನ್ನು ಬಿಟ್ಟು ನಾಡಿನಲ್ಲಿ ದರ್ಶನ ನೀಡಿದ್ದಾನೆ. ಮೈಸೂರು ತಾಲೂಕಿನ ಬ್ಯಾತಳ್ಳಿ, ದೊಡ್ಡಕಾನ್ಯ ಮತ್ತು ಕಡಕೊಳ ಬಳಿ ಹುಲಿ ಕಾಣಿಸಿಕೊಂಡಿದ್ದು, ತಡರಾತ್ರಿ ಈ ಮಾರ್ಗ ಮಧ್ಯ ಸಂಚರಿಸುವವರಿಗೆ ವ್ಯಾಘ್ರನ ದರ್ಶನವಾಗಿದೆ.
ಈ ಮಾರ್ಗದ ಸುತ್ತ ಕೈಗಾರಿಕಾ ಪ್ರದೇಶವಾದ್ದರಿಂದ ಹೆಚ್ಚಾಗಿ ಕಾರ್ಮಿಕರು ಸಂಚಾರ ಮಾಡುತ್ತಾರೆ. ಹುಲಿರಾಯನ ದರ್ಶನದ ಬಳಿಕ ಈ ಮಾರ್ಘದಲ್ಲಿ ಸಂಚಾರ ಮಾಡಲು ಭಯಭೀತರಾಗಿದ್ದಾರೆ.
ಕಾಡಂಚಲ್ಲದ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ನಂಬಲು ಅಸಾಧ್ಯ. ಈ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವ ಬಗ್ಗೆ ಅನೇಕರು ಮಾಹಿತಿ ನೀಡಿದ್ದಾರೆ.ಯಾರು ಭಯಪಡುವ ಅಗತ್ಯವಿಲ್ಲ, ಹುಲಿಯನ್ನು ಪತ್ತೆಹಚ್ಚಿ ಕಾಡಿಗೆ ಕಳಿಸುವ ಕೆಲಸ ಮಾಡಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಸುರೇಂದ್ರ ತಿಳಿಸಿದ್ದಾರೆ.





