Mysore
19
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಇಡಿ ದಾಳಿ ಮೂಲಕ ಸಿದ್ದರಾಮಯ್ಯರನ್ನು ಬೆದರಿಸುವ ಕೆಲಸ: ಎಂ.ಲಕ್ಷ್ಮಣ್‌

ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ ಮೇಲೆ ಇ.ಡಿ.ದಾಳಿ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅವರನ್ನು ಬೆದರಿಸುವ ಕೆಲಸವಷ್ಟೇ. ರಾಜ್ಯದ ಜನತೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಕಚೇರಿಯ ಮೇಲೆ ಇ.ಡಿ. ಎರಡೂ ದಿನ ದಾಳಿ ಮಾಡಿತ್ತು. ಈ ವೇಳೆ ಅನೇಕ ದಾಖಲೆಯನ್ನು ಕೊಂಡೊಯ್ಯಲಾಗಿದೆ. ಯಾವುದಾದರೂ ತನಿಖಾ ಸಂಸ್ಥೆ ವರದಿ ನೀಡಿ ಮನಿ ಲಾಂಡ್ರಿಂಗ್‌ ಆಗಿದ್ದರೆ ಹಣ ಅವ್ಯವಹಾರ ಆಗಿದ್ರೆ ಇ.ಡಿ. ಎಂಟ್ರಿ ಆಗಬೇಕು. ಆದರೆ, ಈ ವಿಚಾರದಲ್ಲಿ ಮೈಸೂರು ಲೋಕಾಯುಕ್ತ ಮತ್ತು ನ್ಯಾಯಾಧೀಶರ ತನಿಖಾ ತಂಡ ತನಿಖೆ ಮಾಡುವ ಹಂತದಲ್ಲೇ ಇ.ಡಿ. ದಾಳಿ ಮಾಡಿದೆ. ಹೀಗಾಗಿ ಈ ಇಡಿ ರೇಡ್‌ ಸಿಎಂ ಸಿದ್ದರಾಮಯ್ಯ ಅವರನ್ನು ಬೆದರಿಸುವ ಕೆಲಸವಷ್ಟೇ ಎಂದು ಕಿಡಿಕಾರಿದ್ದಾರೆ.

ಮುಡಾ ಕಚೇರಿಯ ಮೇಲೆ ಇಡಿ ರೇಡ್‌ ಮಾಡಿದ ಅಧಿಕಾರಿಗಳು ಸಾಕ್ಷಿ ಮತ್ತು ದಾಖಲೆಗಳನ್ನು ಸೃಷ್ಠಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಕ್ರೈಂ ನಡೆಯುವ ಮೊದಲೇ ಕೆಲವು ಮುಡಾ ಅಧಿಕಾರಿಗಳನ್ನು ಬೆದರಿಸಿ ಸಹಿ ಮಾಡಿಸಿಕೊಳ್ಳುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಇ.ಡಿ ಅಧಿಕಾರಿಗಳ ಬಗ್ಗೆ ಕೋರ್ಟ್‌ ಗಮನಕ್ಕೆ ತರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಉಪ ಚುನಾವಣೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗಬೇಕೆಂದು ನೋಟೀಸ್‌ ನೀಡುವ ಸಾಧ್ಯತೆ ಇದೆ. ಬಿಜೆಪಿ ಅವರ ಮನಸ್ಥಿತಿ ಏನು ಎಂಬುದನ್ನು ಈ ಮೂಲಕ ತಿಳಿಯಬಹುದು. ಸಾವಿರಾರು ಕೋಟಿ ರೂ.ಗಳಲ್ಲಿ ಭಾಗಿಯಾಗಿರುವ ನಾಯಕರು ಬಿಜೆಪಿ ಬೆಂಬಲಿಸಿದರೆ ಇ.ಡಿ ಅವರೆ ಕ್ಲಿನ್‌ಚೀಟ್‌ ಕೊಡುತ್ತಾರೆ. ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅಜಿತ್‌ ಪವಾರ್‌ ಸೇರಿದಂತೆ ಅನೇಕ ನಾಯಕರ ಹಗರಣಗಳಿಗೆ ಕ್ಲಿನ್‌ಚೀಟ್‌ ನೀಡಲಾಗಿದೆ. ಹೀಗಾಗಿ ಬಿಜೆಪಿ ಪಕ್ಷದವರು ಅಧಿಕಾರಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಕಿಡಿಕಾರಿದ್ದಾರೆ.

Tags:
error: Content is protected !!