Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ದಸರಾ ದೀಪಾಲಂಕಾರಕ್ಕೆ ಹೊಸ ಮೆರುಗು ನೀಡಲು ಚಿಂತನೆ: ರಮೇಶ್ ಬಂಡಿಸಿದ್ದೇಗೌಡ

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಸರಾ ದೀಪಾಲಂಕಾರವನ್ನು ಈ ವರ್ಷ ಇನ್ನಷ್ಟು ಆಕರ್ಷಕವಾಗಿಸಲು ಪ್ರಾಯೋಜಕರು ಸೂಕ್ತ ಸಲಹೆ, ಸಹಕಾರ ನೀಡುವಂತೆ ಶಾಸಕರು ಆದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷರಾದ ರಮೇಶ್‌ ಬಂಡಿಸಿದ್ದೇಗೌಡ ಕೋರಿದ್ದಾರೆ.

ಮೈಸೂರು ದಸರಾ ಮಹೋತ್ಸವದ-2024ರ ದೀಪಾಲಂಕಾರ ಸಮಿತಿ ವತಿಯಿಂದ ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್‌ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಇತರೆ ಪ್ರಾಯೋಜಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬಾರಿಗಿಂತ ಈ ಬಾರಿಯ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕೆಂದು ಮುಖ್ಯಮಂತ್ರಿಗಳು ಈಗಾಗಲೇ ಉನ್ನತ ಮಟ್ಟದ ಸಭೆಯಲ್ಲಿ ಸೂಚಿಸಿದ್ದಾರೆ. ಹಾಗಾಗಿ, ಈ ಬಾರಿ ದಸರಾ ದೀಪಾಲಂಕಾರವನ್ನು ಆಕರ್ಷಣೀಯ ಹಾಗೂ ವಿನೂತನ ರೀತಿಯಲ್ಲಿ ಮಾಡಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಸೆಸ್ಕ್‌ ತಾಂತ್ರಿಕ ನಿರ್ದೇಶಕರಾದ ಮುನಿಗೋಪಾಲ್‌ ರಾಜು, “ದಸರಾ ಉತ್ಸವದಲ್ಲಿ ದೀಪಾಲಂಕಾರ ಅತ್ಯಂತ ಆಕರ್ಷಣೀಯವಾಗಿರಲಿದೆ. ಹೀಗಾಗಿ ಕಳೆದ 3-4 ವರ್ಷಗಳಿಂದ ದಸರಾ ದೀಪಾಲಂಕಾರಕ್ಕೆ ವಿಶೇಷ ಮೆರಗು ನೀಡುವ ಮೂಲಕ ಅದರ ಆಕರ್ಷಣೆ ಹೆಚ್ಚುವಂತೆ ಮಾಡಲಾಗಿದೆ. ಈ ವರ್ಷ ವಿಜೃಂಭಣೆಯ ದಸರಾ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ದೀಪಾಲಂಕಾರವನ್ನು ಇನ್ನಷ್ಟು ಆಕರ್ಷಕವಾಗಿಸಲು ರೂಪುರೇಷ ಸಿದ್ಧಪಡಿಸಲಾಗುತ್ತಿದೆ. ರಸ್ತೆ ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಮಾಡಲಿರುವ ಪ್ರಾಯೋಜಕರು ಯಾವ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡುತ್ತಾರೆ ಎಂಬುದನ್ನು ಮೊದಲೇ ತಿಳಿಸಬೇಕಿದೆ” ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಮೇಲುಕೋಟೆ ಶಾಸಕರಾದ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, “ದಸರಾ ದೀಪಾಲಂಕಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕಿದೆ. ಇದರಿಂದಾಗಿ ಅವರಿಂದ ಹೊಸ ಆಲೋಚನೆಗಳು ದೊರೆಯಲಿದ್ದು, ದಸರಾ ದೀಪಾಲಂಕಾರ ಆಕರ್ಷಣೀಯಗೊಳಿಸಲು ಸಹಾಯವಾಗಲಿದೆ,” ಎಂದರು.

ಸಭೆಯಲ್ಲಿ ದಸರಾ ದೀಪಾಲಂಕಾರದ ಆಕರ್ಷಣೆ ಹೆಚ್ಚಿಸುವುದರೊಂದಿಗೆ ಜನರ ಸುರಕ್ಷತೆಗೂ ಆದ್ಯತೆ ನೀಡಬೇಕೆಂದು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಪ್ರಾಯೋಜಕರು, ವಿದ್ಯುತ್‌ ಗುತ್ತಿಗೆದಾರರು ದೀಪಾಲಂಕಾರವನ್ನು ಆಕರ್ಷಣೀಯಗೊಳಿಸುವ ಕುರಿತಾಗಿ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ರಮೇಶ್, ಸೆಸ್ಕ್‌ ಅಧಿಕಾರಿಗಳಾದ ಹಣಕಾಸು ನಿರ್ದೇಶಕರಾದ ಶೇಖ್ ಮಹೀಮುಲ್ಲಾ, ಅಧೀಕ್ಷಕ ಇಂಜಿನಿಯರ್ ಸುನೀಲ್ ಕುಮಾರ್ ಹಾಗೂ ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕೆಗಳ ಪ್ರಮುಖರು ಭಾಗವಹಿಸಿದ್ದರು.

“ಈ ಬಾರಿಯ ದಸರೆಯನ್ನು ವಿಭಿನ್ನ ಮತ್ತು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೀಪಾಲಂಕಾರವನ್ನು ಅತ್ಯಂತ ಆಕರ್ಷಕವಾಗಿಸಲು ಎಲ್ಲ ಪ್ರಯತ್ನಗಳು ನಡೆದಿವೆ. ಇದಕ್ಕೆ ಪ್ರಾಯೋಜಕರು ಹೆಚ್ಚಿನ ಸಹಕಾರ ನೀಡಿದರೆ, ದೀಪಾಲಂಕಾರವನ್ನು ಹೆಚ್ಚು ಆಕರ್ಷಣೀಯವಾಗಿ ಮಾಡಬಹುದು”.
ಜಿ. ಶೀಲಾ,
ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್‌

Tags: