ಮೈಸೂರು: ಯುವಕನೋರ್ವನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಎಂಎಲ್‌ಸಿ ಸೂರಜ್ ರೇವಣ್ಣ ವಿರುದ್ಧ ಯಾವುದೆ ಷಡ್ಯಂತರ ನಡೆಸಿಲ್ಲ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದರು.
ಈ ಬಗ್ಗೆ ಮಾತನಾಡಿರುವ ಅವರು, ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸೂರಜ್ ವಿರುದ್ಧ ಯುವಕನೊಬ್ಬ ದೂರು ನೀಡಿದ್ದಾರೆ. ತಪ್ಪು ಯಾರೇ ಮಾಡಿದ್ದರು ಶಿಕ್ಷೆಯಾಗುತ್ತದೆ. ಈ ವಿಚಾರದಲ್ಲಿ ಪೊಲೀಸರು ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಂಬಂಧ ಬಿಜೆಪಿ ಪ್ರತಿಭಟನೆ ನಡೆಸಲು ಯಾವುದೇ ನೈತಿಕತೆ ಇಲ್ಲ. ದೇಶದಲ್ಲಿ ತೈಲ ಬೆಲೆ ಏರಿಕೆಯಾಗಲು ಬಿಜೆಪಿ ಕಾರಣ. ಚುನಾವಣಾ ಸಮಯದಲ್ಲಿ ಬೆಲೆ ಇಳಿಕೆ ಮಾಡಿದರು. ಇದನ್ನು ಈಗ ಏರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.
ಇನ್ನು ಚನ್ನಪಟ್ಟಣ ಉಪ ಚುನಾವಣಾ ಕಣದ ಬಗ್ಗೆ ಮಾತನಾಡಿ, ಉಪ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ವರಿಷ್ಠರು ಮತ್ತು ಸ್ಥಳೀಯ ಮುಖಂಡರು ಸೇರಿ ಅಭ್ಯರ್ಥಿ ಆಯ್ಕೆ ಮಾಡುತ್ತಾರೆ. ಆ ಕ್ಷೇತ್ರದ ಹೈಗ್ರೌಂಡ್ ರಿಯಾಲಿಟಿ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.