ಮೈಸೂರು : ದೇಶದ ಸ್ವಚ್ಚತೆ, ನೈರ್ಮಲ್ಯ ಹಾಗೂ ಜನರ ಆರೋಗ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಬಹಳ ದೊಡ್ಡದು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ನಗರದ ಹೂಟಗಳ್ಳಿಯ ಕಲ್ಯಾಣಮಂಟಪದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಬಸವೇಶ್ವರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಉಚಿತ ಬಟ್ಟೆ ವಿತರಣೆ ಹಾಗೂ ಸಹಪಂಕ್ತಿ ಭೋಜನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದರು. ಎಲ್ಲ ವರ್ಗವನ್ನು ಅಪ್ಪಿಕೊಂಡರು. ಅವರು ಹಾಕಿಕೊಟ್ಟ ಮಾರ್ಗವನ್ನು ಪೌರ ಕಾರ್ಮಿಕ ಸಮುದಾಯ ಅಕ್ಷರಶಃ ಪಾಲಿಸುತ್ತಿದೆ. ಜಾತಿ, ಧರ್ಮವನ್ನು ವಿರೋಧಿಸಿದ್ದ ಬಸವಣ್ಣ ಅವರು, ಮಾನವರೆಲ್ಲರೂ ಒಂದೇ ಎಂದು ಪ್ರತಿಪಾದಿಸಿದವರು ಎಂದು ಸಂತಸ ವ್ಯಕ್ತಪಡಿಸಿದರು. ಮೈಸೂರು ಭಾಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹಾಗೂ ಇಲ್ಲಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ಸಾಮಾಜಿಕ ನ್ಯಾಯ ಹಾಗೂ ಬಡವರ ಏಳಿಗೆಗೆ ದುಡಿದವರು. ಅವರು ತಮ್ಮ ಆಡಳಿತಾವಽಯಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಗೌರವ ನೀಡಿದ್ದರು ಎಂದು ನುಡಿದರು. ಪೌರ ಕಾರ್ಮಿಕರ ಕೆಲಸ ಹಾಗೂ ಅವರ ಶ್ರಮವನ್ನು ಗುರುತಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಅವರು ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸುವುದರ ಜೊತೆಗೆ ಸಹಪಂಕ್ತಿ ಭೋಜನವನ್ನು ಏರ್ಪಡಿಸಿರುವುದು ಅರ್ಥಪೂರ್ಣ ಕಾರ್ಯಕ್ರಮ ಎಂದು ಶ್ಲಾಘಿಸಿದರು.
ಇದೇ ವೇಳೆ ಹೂಟಗಳ್ಳಿ ನಗರಸಭೆ ಮತ್ತು ಇಲವಾಲ ಹೋಬಳಿಯ ಎಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಲಾಯಿತು. ನಂತರ ಏರ್ಪಡಿಸಲಾಗಿದ್ದ ಸಹಪಂಕ್ತಿ ಭೋಜನದಲ್ಲಿ ಗಣ್ಯರೊಂದಿಗೆ ಪೌರ ಕಾರ್ಮಿಕರು ಭೋಜನ ಸವಿದರು. ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ವಹಿಸಿದ್ದರು. ಶ್ರೀ ಯೋಗನರಸಿಂಹ ಸ್ವಾಮಿ ದೇವಾಲಯದ ಎನ್.ಶ್ರೀನಿವಾಸ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕವೀಶ್‌ಗೌಡ, ಸುರೇಶ್‌ಕುಮಾರ್, ಪ್ರಶಾಂತ್, ಹೂಟಗಳ್ಳಿ ನಗರಸಭೆ ಆಯುಕ್ತ ಚಂದ್ರಶೇಖರ್ ಮುಂತಾದವರು ಬಾಗವಹಿಸಿದ್ದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಉಚಿತ ನೇತ್ರ ತಪಾಸಣಾ ಶಿಭಿರವನ್ನು ಆಯೋಜಿಸಲಾಗಿತ್ತು.





