ನಂಜನಗೂಡು : ಕಾಡಿನಿಂದ ತಪ್ಪಿಸಿಕೊಂಡು ಬಂದು, ನಾಲೆಗೆ ಬಿದ್ದು ಮೇಲಕ್ಕೆ ಬರಲಾಗದೆ ಪರದಾಡುತ್ತಿದ್ದ ಜಿಂಕೆಯನ್ನು ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಕರಿಬಸಪ್ಪ ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನಂಜನಗೂಡು ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಾಲೆಯಲ್ಲಿ ನೀರು ಕುಡಿಯುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿಕೊಂಡು ಬಂದಿವೆ. ಈ ಸಮಯದಲ್ಲಿ ನಾಯಿಗಳಿಂದ ಜಿಂಕೆ ತಪ್ಪಿಸಿಕೊಳ್ಳಲು ನಾಲೆಗೆ ಬಿದ್ದಿದೆ. ಸುಮಾರು ಎಂಟು ವರ್ಷದ ಗಂಡು ಜಿಂಕೆಯಾಗಿದ್ದು, ನಾಲೆಯಲ್ಲಿ ತೇಲಿಕೊಂಡು ಬರುತ್ತಿರುವುದನ್ನು ಕಂಡ ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಕರಿಬಸಪ್ಪ. ಜಿಂಕೆಯನ್ನು ಸುರಕ್ಷಿತವಾಗಿ ಗ್ರಾಮದ ಯುವಕರ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ.
ಜಿಂಕೆಯ ಹಿಂಬದಿಯ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿರುವ ಗುರುತು ಕಂಡು ಬಂದಿದೆ ನಂಜನಗೂಡಿನ ಪಶು ಇಲಾಖೆಯಲ್ಲಿ ಚಿಕಿತ್ಸೆ ನೀಡಿ ಮತ್ತೆ ಕಾಡಿಗೆ ಬಿಡಲಾಗುವುದು ಎಂದು ನಂಜನಗೂಡಿನ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.