ಮೈಸೂರು: ಮೈಸೂರು-ಹುಣಸೂರು ಮುಖ್ಯ ರಸ್ತೆಯಲ್ಲಿ ಜನರಿಗೆ ಭೀತಿ ಸೃಷ್ಟಿಸುವಂತೆ ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ ಯುವಕನನ್ನು ಇಲವಾಲ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಆರ್.ಮಹೇಶ್ ಕುಮಾರ್ ಅವರು ಬಂಧಿಸಿದ್ದಾರೆ.
ಪೊಲೀಸರು ಬಂಧಿಸಿದ ಯುವಕನನ್ನು ಮೈಸೂರಿನ ಮೇಟಗಳ್ಳಿಯ ಬಡಾವಣೆಯ ಏಕಲವ್ಯ ನಿವಾಸಿ ಪ್ರಜ್ವಲ್(22) ಎಂದು ಗುರುತಿಸಲಾಗಿದೆ. ಈತನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರಗಳನ್ನು ಅಪ್ ಲೋಡ್ ಮಾಡುವ ಖಾತೆಗಳ ಮೇಲೆ ನಿಗಾ ಇಡುವ ಜವಾಬ್ದಾರಿ ಹೊತ್ತ ಪೊಲೀಸ್ ಸಿಬ್ಬಂದಿ ಅಭಿಷೇಕ್ ಅವರು, ಪ್ರಜ್ವಲ್ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿರುವ ಫೋಟೋಗಳನ್ನು ಪತ್ತೆ ಹಚ್ಚಿದ್ದರು. ಈ ಘಟನೆ ಇಲವಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಠಾಣೆಯ ಪಿಎಸ್‌ಐ ಅಧಿಕಾರಿಯ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ಪೊಲೀಸರು, ಹೋಂಡಾ ಡಿಯೋ ವಾಹನ ನೋಂದಣಿ ಸಂಖ್ಯೆ KA-12 S5574 ಅನ್ನು ವಶಕ್ಕೆ ಪಡೆದು, ಮುಖ್ಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಾ ಅಪಾಯಕಾರಿ ಸ್ಟಂಟ್ಸ್ ಮಾಡುತ್ತಿದ್ದ ಪ್ರಜ್ವಲ್‌ನನ್ನು ಬಂಧಿಸಿದ್ದಾರೆ.




