ತಿ.ನರಸೀಪುರ : ಕೇರಳದ ವಯನಾಡು ಮತ್ತು ಕೊಡಗು ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿ ಭಾರೀ ಪ್ರಮಾಣದಲ್ಲಿ ನದಿಗೆ ನೀರು ಬಿಡಲಾಗುತ್ತಿದ್ದು, ಕೆಆರ್‌ಎಸ್ ಜಲಾಶಯದಿಂದಲೂ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ಪಟ್ಟಣದ ತಿರುಮಕೂಡಲಿನ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನ, ಶ್ರೀ ಗುಂಜಾ ನರಸಿಂಹ ಸ್ವಾಮಿ ಹಾಗೂ ಶ್ರೀ ಭಿಕ್ಷೇಶ್ವರ ದೇವಾಲಯಗಳ ಸಮೀಪ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ.
ತಾಲ್ಲೂಕಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ಕಬಿನಿ ಹಾಗೂ ಕಾವೇರಿ ಜಲಾಶಯಗಳಿಂದ ಒಟ್ಟು 1.25 ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಹರಿದು ಬರುತ್ತಿದ್ದು, ಇನ್ನೂ ಹೆಚ್ಚಿನ ನೀರನ್ನು ನದಿಗೆ ಬಿಟ್ಟರೆ ಸಮಸ್ಯೆ ಆಗುವ ಸಂಭವ ಇದೆ.
ಈ ಕುರಿತು ಆಂದೋಲನದೊಂದಿಗೆ ಪ್ರತಿಕ್ರಿಯಿಸಿದ ತಿ.ನರಸೀಪುರ ತಹಸಿಲ್ದಾರ್ ಸುರೇಶಾಚಾರ್, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದ್ದು, ತಾಲ್ಲೂಕಿನ ಹೆಮ್ಮಿಗೆ ತೂಗು ಸೇತುವೆ ಮೇಲೆ ಹರಿಯಲು 3-4 ಅಡಿಗಳಷ್ಟೇ ಬಾಕಿ ಇದೆ. ಇದಲ್ಲದೆ ಮಾಲಂಗಿ ಗ್ರಾಮಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಜಮೀನುಗಳು ಸಹ ಮುಳುಗಡೆಯಾಗಿರುವ ಬಗ್ಗೆ ಮಾಹಿತಿ ಇಲ್ಲ. 1.50 ಲಕ್ಷ ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಬಂದರೆ ಜಮೀನುಗಳು ಹಾಗೂ ಮಾಲಂಗಿ, ಹೆಮ್ಮಿಗೆ ಸೇತುವೆ ಮೇಲೆ ನೀರು ಹರಿಯಲು ಆರಂಭಿಸುತ್ತದೆ ಎಂದು ತಿಳಿಸಿದರು.





