Mysore
29
few clouds

Social Media

ಮಂಗಳವಾರ, 27 ಜನವರಿ 2026
Light
Dark

ತಲಕಾಡು | ನದಿ ನೀರಿಗಿಳಿದ ಐವರ ಪೈಕಿ ಇಬ್ಬರ ದುರ್ಮರಣ

ತಲಕಾಡು (ತಿ.ನರಸೀಪುರ ತಾ.): ನದಿ ನೀರಿಗಿಳಿದು ಐವರು ಗೆಳೆಯರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ತಾಲೂಕಿನ ಮೇದಿನಿ ಗ್ರಾಮದ ಶ್ರೀ ರಾಮ ಕಟ್ಟೆಯ ನದಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಕೊಳ್ಳೇಗಾಲ ಮೂಲದ ಭರತ್ (17) ಮತ್ತು ಲಿಖಿತ್ (18) ಎಂಬ ವಿದ್ಯಾರ್ಥಿಗಳು ಮೃತಪಟ್ಟವರು. ಭರತ್, ಲಿಖಿತ್, ಅಕ್ಷಯ್, ಡ್ಯಾನಿಯಲ್, ಭಾರತ್ ಎಂಬ ಐವರು ಕೊಳ್ಳೇಗಾಲ ಪಟ್ಟಣದ ಮಾನಸ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಇತ್ತೀಚೆಗಷ್ಟೇ ಪರೀಕ್ಷೆ ಬರೆದಿದ್ದರು. ಶನಿವಾರ ಮಧ್ಯಾಹ್ನ ವಿಹಾರಾರ್ಥವಾಗಿ ಮೇದಿನಿ ಶ್ರೀರಾಮ ಅಣೆಕಟ್ಟೆಯ ಬಳಿಗೆ ತೆರಳಿದ್ದರು.

ಭರತ್ ಹಾಗೂ ಲಿಖಿತ್ ನದಿಗಿಳಿದು ನೀರಿನಲ್ಲಿ ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ನೀರಿನ ಆಳಕ್ಕೆ ಜಾರಿದ್ದಾರೆ. ಇಬ್ಬರಿಗೂ ಈಜು ಬಾರದ್ದರಿಂದ ಅಪಾಯದಿಂದ ಪಾರಾಗಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ನೀರಿನ ರಭಸ ಹೆಚ್ಚಿದ್ದರಿಂದ ಕಟ್ಟೆಯ ಗೇಟ್ ಒಳಗಡೆಯಿಂದ ಹೊರನದಿಗೆ ನೂಕಲ್ಪಟ್ಟಿರಬಹುದು ಎಂದು ಅಂದಾಜು ನಡೆಸಿದ ಪೊಲೀಸರು, ಗೇಟ್ ಬಳಿ ಸೇರಿದಂತೆ ಗೇಟ್ ಕೆಳಭಾಗದ ನದಿ ಉದ್ದಕ್ಕೂ ಶವಗಳ ಶೋಧನೆ ನಡೆಸಿದ್ದಾರೆ.

ಸ್ಥಳಕ್ಕೆ ತಲಕಾಡು ಠಾಣೆಯ ಪೊಲೀಸರು ಧಾವಿಸಿದ್ದು, ಶವದ ಶೋಧನೆಗೆ ನೆರವಾಗಿದ್ದಾರೆ. ಜಿಲ್ಲಾ ಅಡಿಷನಲ್ ಎಸ್‌ಪಿ ಮಲಿಕ್, ನಂಜನಗೂಡು ಡಿವೈಎಸ್‌ಪಿ ರಘು, ತಲಕಾಡು ಎಸ್‌ಐ ಆನಂದ್ ಕುಮಾರ್, ಎಸ್‌ಐ ಮಹದೇವು, ಎಎಸ್‌ಐ ನಾಗೇಂದ್ರ, ಸಿಬ್ಬಂದಿ ವರ್ಗ, ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹಗಳ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.

Tags:
error: Content is protected !!