ಟಿ.ನರಸೀಪುರ : ಇಲ್ಲಿನ ತಲಕಾಡು ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ನಾಮಫಲಕ ಅಳವಡಿಕೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗಗಳ ನಡುವೆ ಬೋರ್ಡ್ ನೆಡುವ ವಿಚಾರಕ್ಕೆ ಘರ್ಷಣೆಯಾಗಿದೆ. ನಾಯಕ
ಜನಾಂಗಕ್ಕೆ ಸೇರಿದ ಜಾಗದಲ್ಲಿ ಅಂಬೇಡ್ಕರ್ ಭಾವಚಿತ್ರದ ಬೋರ್ಡ್ ಅಳವಡಿಕೆ ಮಾಡಲಾಗಿದೆ ಎಂದು ಆರೋಪಿಸಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸರು ಎರಡು ಗುಂಪಿನ ನಡುವೆ ಮಾತುಕತೆ ನಡೆಸಿದ್ದಾರೆ. ಪೊಲೀಸರ ಮಾತಿಗೂ ಕಿವಿಗೊಡದ ನಾಯಕ ಸಮುದಾಯದ ಯುವಕರು, ಅಂಬೇಡ್ಕರ್ ಭಾವಚಿತ್ರದ ಬೋರ್ಡ್ ನ ಪಕ್ಕದಲ್ಲಿ ಮದಕರಿ ಭಾವಚಿತ್ರವಿರುವ ಬೋರ್ಡ್ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತರಲು ಶ್ರಮಿಸುತ್ತಿದ್ದಾರೆ.