ಮೈಸೂರು: ಉತ್ತರ ಪ್ರದೇಶದ ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಸಾಧ್ಯವಾಗಿಲ್ಲ ಎಂದು ಕೊಳ್ಳುತ್ತಿದ್ದ ನಾಡಿನ ಜನತೆ ಟಿ.ನರಸೀಪುರ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ 13ನೇ ಕುಂಭಮೇಳವು ಇಂದಿನಿಂದ(ಫೆಬ್ರವರಿ.10) ಅದ್ದೂರಿಯಾಗಿ ಆರಂಭವಾಗಿದ್ದು, ಮೊದಲ ದಿನದ ಮುಂಜಾನೆಯೇ ಸಹಸ್ರಾರು ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.
ಇಂದು ಮುಂಜಾನೆ 5 ಗಂಟೆಯಿಂದಲೇ ಪುಣ್ಯ ಸ್ನಾನ ಮಾಡುವುದಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದ್ದು, ಸ್ನಾನಘಟ್ಟದಲ್ಲಿ ಭಕ್ತರಿಗಾಗಿಯೇ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ನಾಡಿನ ಜನತೆ ಭಕ್ತಿ ಭಾವದಿಂದ ಬಂದು ಸ್ನಾನ ಮಾಡಿ ಕೃತಜ್ಞರಾಗಿದ್ದಾರೆ. ಅಲ್ಲದೇ ಜಿಲ್ಲಾಡಳಿತದ ವತಿಯಿಂದಲೂ ಸ್ನಾನ ಮಾಡುವ ಭಕ್ತರಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಸಕಲ ಸಿದ್ಧತೆಗಳನ್ನು ಏರ್ಪಡಿಸಲಾಗಿದೆ. ಇನ್ನೂ ಈ ಕುಂಭಮೇಳವೂ ಇನ್ನೆರಡು ದಿನಗಳ ಕಾಲ ನಡೆಯಲಿದೆ.





