Mysore
20
overcast clouds
Light
Dark

ರಾಯಭಾರಿ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರ ಮೈಸೂರಿನಲ್ಲಿ ಬಂಧನ

ಮೈಸೂರು: ಬೆಂಗಳೂರಿನ ಇಸ್ರೇಲ್ ಹಾಗೂ ಚೆನ್ನೈನ ಅಮೆರಿಕ ರಾಯಭಾರಿ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪಿಗಳಿಗೆ ಸಹಕರಿಸಿದ್ದ ಶಂಕಿತ ಉಗ್ರನನ್ನು ಮೈಸೂರಿನಲ್ಲಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಶಂಕಿತ ಉಗ್ರ. ಮೈಸೂರಿನ ರಾಜೀವ್‌ನಗರದಲ್ಲಿ ಇಂದು(ಮೇ.15) ಎನ್‌ಐಎ ಅಧಿಕಾರಿಗಳು ಉಗ್ರನನ್ನು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಫೋನ್, ಪೆನ್ಡ್ರೈವ್, ಡ್ರೋನ್ ಮೊದಲಾದವು ಬಂಧಿತನ ಬಳಿ ಇದ್ದುದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಲಂಕಾ ಪ್ರಜೆ ಮೊಹಮ್ಮದ್ ಸಕೀರ್ ಹುಸೇನ್ ಹಾಗೂ ಕೊಲಂಬೊದ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರರಾಗಿರುವ ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿ ಬೆಂಗಳೂರಿನ ಇಸ್ರೇಲ್ ಹಾಗೂ ಚೆನ್ನೈನ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆ ಸಂಧರ್ಭದಲ್ಲಿ ಆರೋಪಿ ನೂರುದ್ದೀನ್‌ ಪಾಕಿಸ್ತಾನಿ ಪ್ರಜೆಯ ಆದೇಶದ ಮೇರೆಗೆ ನಕಲಿ ನೋಟುಗಳನ್ನು ಪೂರೈಸುವ ಮೂಲಕ ಪಾಕಿಸ್ತಾನ ಬೇಹುಗಾರಿಗೆ ಚಟುವಟಿಗೆಗೆ ಹಣಕಾಸು ಸಹಾಯ ಒದಗಿಸುತ್ತಿದ್ದ ಎಂದು ಎನ್‌ಐಎ ತನಿಖೆಯಿಂದ ಗೊತ್ತಾಗಿತ್ತು. ಈ ಸಂಬಂಧ ಎನ್‌ಐಎ 2014ರಲ್ಲಿ ನೂರುದ್ದೀನ್‌ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿತ್ತು.

2023ರ ಆಗಸ್ಟ್‌ನಲ್ಲಿ ಆರೋಪಿಯು ಜಾಮೀನಿನ ಮೇಲೆ ಹೊರಬಂದಿದ್ದು, ನಂತರ ಚೆನ್ನೈನ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ‘ಆರೋಪಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ನೂರುದ್ದೀನ್ ನಾಪತ್ತೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಚಾರಣೆಯನ್ನು ಈಗ ಮುಂದುವರಿಸಲಾಗುವುದು ಎಂದು ಎನ್ಐಎ ಮಾಹಿತಿ ನೀಡಿದೆ.

Tags: