ಮೈಸೂರು: ಚಾಮರಾಜನಗರ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಇರುವ ಹಿನ್ನೆಲೆಯಲ್ಲಿ ಅದನ್ನು ತೆಗೆದುಹಾಕಲು ವಿಶೇಷ ಯೋಜನೆ ರೂಪಿಸಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ಸಿಎಂ ಬಳಿ 3 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಫೆಬ್ರವರಿ.19) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆ ಎಂದು ಘೋಷಣೆ ಆಗಿದೆ. ಅದರ ಅನುಗುಣವಾಗಿ ವಿಶೇಷ ಪ್ಯಾಕೇಜ್‌ಗಳನ್ನು ನೀಡುವ ಕೆಲಸ ಆಗುತ್ತಿಲ್ಲ. ನಾನು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯವಸಾಯ ಮಾಡದೆ ಬರಡು ಬಿದ್ದಿರುವ ಭೂಮಿಗಾಗಿ ವಿಶೇಷ ಯೋಜನೆ ರೂಪಿಸಿದ್ದೇವೆ ಎಂದರು.
ಇನ್ನು ಬರಡು ಭೂಮಿಯನ್ನು ವ್ಯವಸಾಯದತ್ತ ತರುವ ನಿರಾವರಿ ಯೋಜನೆಗೆ ಸುಮಾರು 3 ಸಾವಿರ ಕೋಟಿ ರೂ. ಪ್ರಾಜೆಕ್ಟ್‌ಗೆ ಮನವಿ ಮಾಡಿದ್ದೇನೆ. ಅಲ್ಲದೇ ಸರ್ಕಾರದಿಂದ ಹಂತ ಹಂತವಾಗಿ ಹಣ ಬಿಡುಗಡೆಗೊಳಿಸುವಂತೆ ಹೇಳಿದ್ದೇನೆ. ಹೀಗಾಗಿ ಅನುದಾನದ ಹಣದಿಂದ ಬರಡು ಭೂಮಿಗಳಿಗೆ ನೀರಾವರಿ ಒದಗಿಸಬಹುದು ಎಂದು ಹೇಳಿದರು.
ಈಗಾಗಲೇ ನೀರಾವರಿ ಸೌಲಭ್ಯ ಇಲ್ಲದೆ ಅಲ್ಲಿನ ನಾಲೆಗಳು ಪಾಳು ಬಿದ್ದಂತಿವೆ. ಆ ನಾಲೆಗಳ ಯೋಜನೆಗಳ ಬಗ್ಗೆ ಡಿಪಿಆರ್ ತಯಾರಾಗಿದೆ. ಈ ಯೋಜನೆಗಳಿಗೂ ಸಿಎಂ ಸಿದ್ದರಾಮಯ್ಯ ಅವರು ಅನುದಾನ ನೀಡುವ ವಿಶ್ವಾಸ ಇದೆ ಎಂದು ತಿಳಿಸಿದರು.





