Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗುರಿ ದೊಡ್ಡದಾಗಿರಲಿ, ಪ್ರಯತ್ನ ನಿರಂತರವಾಗಿರಲಿ: ಡಾ.ಕೆ.ವಿ. ರಾಜೇಂದ್ರ

ಮೈಸೂರು: ಪ್ರಸ್ತುತ ನಾವು ಸ್ಪರ್ಧಾತ್ಮಕ ಯುಗದಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷಾರ್ಥಿಯೂ ಏನನ್ನೇ ಸಾಧಿಸಬೇಕಾದರೂ ಮೊದಲು ತನ್ನ ಗುರಿಯನ್ನು ದೊಡ್ಡದಾಗಿರಿಸಿಕೊಂಡು, ಅದರ ಕಡೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸಲಹೆ ನೀಡಿದರು.

ಇಂದು (ಮಾ.24) ಯುವರಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೆ.ಎ.ಎಸ್ ಹುದ್ದೆಯ ಆಕಾಂಕ್ಷಿಗಳಿಗೆ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಸಾಮಾನ್ಯವಾಗಿದ್ದು, ಯುಪಿಎಸ್‌ಸಿ, ಕೆ.ಎ.ಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಲು ಸಿಕ್ಕ ಅವಕಾಶಗಳನ್ನು ಸದುಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ಪರೀಕ್ಷಾರ್ಥಿಗು ಕಠಿಣ ಪರಿಶ್ರಮ, ತಾಳ್ಮೆ, ಸಮಯ ಪ್ರಜ್ಞೆ , ಏಕಾಗ್ರತೆ ಎಂಬುದು ಬಹಳ ಮುಖ್ಯವಾಗಿದ್ದು, ಅದನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ನಾವು ಪ್ರತಿನಿತ್ಯವೂ ಹೊಸ ಹೊಸದಾಗಿ ನೋಡಿದ, ಕೇಳಿದ ವಿಷಯಗಳನ್ನು ವೈಜ್ಞಾನಿಕವಾಗಿ ಯೋಚಿಸಿ ಅದರ ಬಗ್ಗೆ ತಿಳಿದುಕೊಳ್ಳಬೇಕು. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಬದಲು ಪರೀಕ್ಷೆಯನ್ನು ಎದುರಿಸುವಲ್ಲಿ ಆರಂಭದಿಂದಲೂ ಸತತ ಪ್ರಯತ್ನ ಮಾಡಬೇಕು ಎಂದರು.

ಪ್ರತಿನಿತ್ಯ ದಿನಪತ್ರಿಕೆಗಳು, ಪುಸ್ತಕಗಳು, ಕಾದಂಬರಿಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಬೇಕು. ಸ್ಪರ್ಧಾರ್ಥಿಗಳೂ ಯಾವಾಗಲೂ ಐ.ಎ.ಎಸ್ ಐ.ಪಿ.ಎಸ್‌ನಂತಹ ದೊಡ್ಡ ಹುದ್ದೆಗಳಿಗೆ ಸೇರುವ ಆಸೆಯನ್ನು ಹೊಂದಿದ್ದು ಪ್ರಯತ್ನ ಮಾಡಿದ್ದಲ್ಲಿ ಕನಿಷ್ಠ ಪಕ್ಷ ಕೆ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಕೊಡುಗೆ ನೀಡಬಹುದು ಎಂದರು.

ಎಷ್ಟೋ ಸ್ಪರ್ಧಾರ್ಥಿಗಳಲ್ಲಿ ಭಾಷೆಯ ಬಗ್ಗೆ ಗೊಂದಲಗಳಿವೆ. ಇಂಗ್ಲೀಷ್‌ನಲ್ಲೇ ಎಲ್ಲವೂ ಕಡ್ಡಾಯವಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ವಿವಿಧ ರೀತಿಯ ಹುದ್ದೆಗಳಿದ್ದರೂ ಸಹ ಪ್ರಶ್ನೆ ಪತ್ರಿಕೆಗಳ ಸ್ವರೂಪ ಒಂದೇ ಆಗಿರುತ್ತದೆ ಆದ್ದರಿಂದ ಪ್ರಚಲಿತ ವಿದ್ಯಮಾನಗಳು ಹಾಗೂ ಹಳೇ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚು ಮನನ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಎನ್. ಎನ್. ಮಧು ಅವರು ಮಾತನಾಡಿ ಸಮಾಜಕ್ಕೆ ಅಧಿಕಾರಿಗಳ ಕೊಡುಗೆ ಹೆಚ್ಚಾಗಿದ್ದು, ಸ್ಪರ್ಧಾರ್ಥಿಗಳು ಶ್ರಮಪಟ್ಟು ನಿರಂತರವಾಗಿ ಓದುವ ಅಭ್ಯಾಸದಲ್ಲಿ ತೊಡಗಬೇಕು. ಕಠಿಣ ಪರಿಶ್ರಮ, ತಾಳ್ಮೆ ಪ್ರತಿ ಸ್ಪರ್ಧಾರ್ಥಿಗೂ ಅತ್ಯಂತ ಅವಶ್ಯಕವಾದುದು ಇವುಗಳನ್ನು ಸಾಧಿಸಿದ್ದೇ ಆದಲ್ಲಿ ಆತ ಯಶಸ್ಸು ಸಾಧಿಸಬಹುದು ಎಂದರು.

ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು ಫೇಲ್ ಎಂಬುದು ಪಾಸ್ ಆಗುವ ಮೊದಲ ಹೆಜ್ಜೆ ಎಂದು ನಿರಂತರ ಪ್ರಯತ್ನ ಮಾಡಬೇಕು. ಆದಷ್ಟು ಸೆಲ್ಫ್ ಮೋಟಿವೇಟ್ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ.ರಂಗೇಗೌಡ, ಮೈಸೂರು ವಿಶ್ವವಿದ್ಯಾನಿಲಯದ ಪಿ.ಎಂ.ಇ ಬೋರ್ಡ್ ನ ನಿರ್ದೇಶಕರಾದ ಪ್ರೊ.ಎನ್ ನಾಗರಾಜ್, ಮೈಸೂರು ವಿಶ್ವವಿದ್ಯಾನಿಲಯದ ಯು.ಸಿ. ಎಚ್ ನ ಸಂಯೋಜಕರಾದ ಪ್ರೋ . ಹಂಸವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಸ್ಪರ್ಧಾ ಕೇಂದ್ರದ ಸಂಯೋಜಕರಾದ ಡಾ. ಸುರೇಶ್, ಯುವರಾಜ ಕಾಲೇಜಿನ ಪ್ರೊ. ದೇವಿಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags: