Mysore
20
overcast clouds
Light
Dark

ಮೈಸೂರಿನ ಪೂರ್ಣ ಚೇತನ ಶಾಲೆಯಲ್ಲಿ ನಿರ್ಮಾಣವಾಗಲಿದೆ ವಿದ್ಯಾರ್ಥಿಗಳ ಕನಸಿನ ಸ್ಮಾರ್ಟ್‌ ವಿಲೇಜ್‌

ಮೈಸೂರು: ಮೈಸೂರಿನ ಪೂರ್ಣ ಚೇತನ ಶಾಲೆಯಲ್ಲಿ ವಿದ್ಯಾರ್ಥಿಗಳ ಕನಸಿನ ಸ್ಮಾರ್ಟ್‌ ವಿಲೇಜ್‌ ನಿರ್ಮಾಣವಾಗಲಿದೆ.

ಈ ಕನಸಿನ ಹಳ್ಳಿಯಲ್ಲಿ ಬೀದಿ ದೀಪಗಳು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿದ್ದು, ಹಳ್ಳಿಯ ರೈತ ತನ್ನ ಹೊಲದಲ್ಲಿನ ಬೆಳೆಗಳ ಬಗ್ಗೆ ಚಿಂತಿಸಬೇಕಿಲ್ಲ. ಏಕೆಂದರೆ ಇಲ್ಲಿನ ಹೊಲಗಳಿಗೆ ಲೇಸರ್‌ ಭದ್ರತಾ ಕವಚವಿದೆ. ಇಲ್ಲಿ ಯಾರಾದರೂ ಮದ್ಯಪಾನ ಮಾಡಿ ಬಂದರೆ, ಸ್ವಯಂ ಚಾಲಿತ ಸಾಧನ ಅದನ್ನು ಪತ್ತೆ ಹಚ್ಚುತ್ತದೆ.

ಇನ್ನು ಮೈಸೂರು ನಗರ ಸೇರಿದಂತೆ ಎಲ್ಲಾ ಹಳ್ಳಿ-ಪಟ್ಟಣಗಳ ಅತಿ ದೊಡ್ಡ ಸವಾಲು ತ್ಯಾಜ್ಯ ನಿರ್ವಹಣೆ. ಅದಕ್ಕೂ ಈ ಸ್ಮಾರ್ಟ್‌ ಹಳ್ಳಿಯಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳು ಪರಿಹಾರ ಒದಗಿಸಲಿದ್ದಾರೆ. ಈ ಹಳ್ಳಿಯಲ್ಲಿ ಕಸ-ತ್ಯಾಜ್ಯ ವಿಂಗಡಣೆ ಸಂಪೂರ್ಣ ಆಟೋಮ್ಯಾಟಿಕ್.‌ ಇಲ್ಲಿನ ಸ್ಮಾರ್ಟ್‌ ಕಸದ ಬುಟ್ಟಿಗಳು ಅಷ್ಟು ಸ್ಮಾರ್ಟ್‌ ಆಗಿದೆ. ಇನ್ನು ಹಳ್ಳಿಯಲ್ಲಿ ವಾಯುಮಾಲಿನ್ಯ ಉಂಟಾದರೆ ತಕ್ಷಣ ಹಳ್ಳಿಗರಿಗೆ ಎಚ್ಚರಿಕೆ ಸಂದೇಶ ಹೋಗುತ್ತದೆ. ಇನ್ನು ಹಳ್ಳಿ ಬದುಕಿನ ಅವಿಭಾಜ್ಯ ಅಂಗವಾದ ಪಶುಪಾಲನೆಯಲ್ಲಿ ಪಶುಗಳಿಗೆ ಮೇವು ನೀಡಿಕೆಯ ಕೆಲಸ ಸಂಪೂರ್ಣ ಆಟೋಮೇಟೆಡ್.‌ ರೈತರ ಹೊಲಕ್ಕೆ ಎಷ್ಟು ನೀರು ಬೇಕು, ಹೊಲದ ಮಣ್ಣಿನಲ್ಲಿ ನೀರಿನ ಅಂಶವಿದೆಯೇ ಹೀಗೆ ಎಲ್ಲವನ್ನೂ ಇಲ್ಲಿ ಸ್ಮಾರ್ಟ್‌ ಆಗಿ ನಿರ್ವಹಿಸಲಾಗುತ್ತದೆ.

ಇದೇ ಶನಿವಾರ ಮೈಸೂರು ನಗರದ ಹೊರವಲಯದಲ್ಲಿರುವ ಎಚ್.ಡಿ.ಕೋಟೆ ರಸ್ತೆಯ ಪೂರ್ಣ ಚೇತನ ಶಾಲೆಯಲ್ಲಿ 7ರಿಂದ 10ನೇ ತರಗತಿಯವರೆಗಿನ 136 ವಿದ್ಯಾರ್ಥಿಗಳನ್ನೊಳಗೊಂಡ 68 ತಂಡಗಳು ಈ ಪ್ರತಿಕೃತಿಯನ್ನು ಸೃಷ್ಟಿಸಲಿದ್ದಾರೆ.

68 ವಿಶಿಷ್ಟ ರೊಬೋಟಿಕ್‌ ಮಾದರಿಗಳನ್ನು ಅವರು ಇಲ್ಲಿ 16 ಗಂಟೆಗಳ ಅವಧಿಯಲ್ಲಿ ಸೃಷ್ಟಿಸಲಿದ್ದಾರೆ. ಈ ಯುವ ಬಾಲಪ್ರತಿಭೆಗಳು ಕೋಡಿಂಗ್‌, ರೋಬೋಟಿಕ್‌ ಹಾಗೂ ಕೃತಕ ಬುದ್ದಿಮತ್ತೆಯ ತಂತ್ರಜ್ಞಾನ ಬಳಸಿಕೊಂಡು ಅತ್ಯಾಧುನಿಕ, ಸುಸ್ಥಿರ ಸ್ಮಾರ್ಟ್‌ ಹಳ್ಳಿಯ ಕಲ್ಪನೆಯನ್ನು ಸಾಕಾರಗೊಳಿಸಲಿದ್ದಾರೆ.

ಇಲ್ಲಿ ಎಲ್ಲಾ ವಿದ್ಯಾರ್ಥಿಗಳು ರೂಪಿಸುವ ಎಲ್ಲಾ ಪ್ರತಿಕೃತಿಗಳು ಕೆಲಸ ಮಾಡುವಂತಾಗಿದ್ದು, ನಮ್ಮ ಹಳ್ಳಿಗಳ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿವೆ. ವಿದ್ಯಾರ್ಥಿಗಳು ನಮ್ಮ ಹಳ್ಳಿಗಳ ಬದುಕನ್ನು ಇನ್ನಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನ ನಡೆಸಲಿದ್ದಾರೆ.