- ಕೇಳಿದ್ದು ೧೮ ಸಾವಿರ ಕೋಟಿ ರೂ., ಕೊಟ್ಟಿದ್ದು ೩,೪೫೪ ಕೋಟಿ ರೂ.
ಮೈಸೂರು: ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾನದಂಡದ ಅಡಿಯಲ್ಲಿ ಸುಮಾರು ೧೮ ಸಾವಿರ ಕೋಟಿ ರೂ. ಬರ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ ಕೇಂದ್ರ ಸರ್ಕಾರ ೩,೪೫೪ ಕೋಟಿ ರೂ. ಬರ ಪರಿಹಾರ ಬಿಡುಗಡೆಗೊಳಿಸಿದ್ದು, ಭಿಕ್ಷೆ ರೂಪದಲ್ಲಿ ಪರಿಹಾರ ನೀಡಲಾಗಿದೆ. ಆದ್ದರಿಂದ, ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನ್ಯಾಯಾಲಯದಲ್ಲಿನ ಹೋರಾಟ ಮುಂದುವರಿಸುವುದು ಅಗತ್ಯ ಎಂದರು.
ಬಿಜೆಪಿ ಸೋಲಿಸಿ-ರೈತರ ಉಳಿಸಿ ಅಭಿಯಾನ: ಕೇಂದ್ರದ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ರಾಜ್ಯ ರೈತ ಸಂಘದಿಂದ ಚುನಾವಣೆ ವೇಳೆ ಬಿಜೆಪಿ-ಜಾ.ದಳ ಮೈತ್ರಿ ಅಭ್ಯರ್ಥಿಗಳನ್ನು ಸೋಲಿಸಿ, ರೈತರನ್ನು ಉಳಿಸಿ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಮೊದಲ ಹಂತದ ಚುನಾವಣೆ ವೇಳೆ ಸುಮಾರು ಶೇ.೪ರಷ್ಟು ರೈತರ ಮತಗಳು ಮೈತ್ರಿ ಪಕ್ಷ ವಿರುದ್ಧವಾಗಿ ಚಲಾವಣೆ ಆಗಿರುವ ಸಾಧ್ಯತೆ ಇದೆ. ಇದೇ ರೀತಿ ೨ನೇ ಹಂತದಲ್ಲಿಯೂ ಉತ್ತರ ಕರ್ನಾಟಕದಲ್ಲಿಯೂ ರೈತ ಸಂಘ ಅಭಿಯಾನ ಮುಂದುವರಿಸಲಿದೆ ಎಂದರು.
ವಿದ್ಯುತ್ ಸಂಪರ್ಕ ಶುಲ್ಕ ಹೆಚ್ಚಳಕ್ಕೆ ಖಂಡನೆ: ಬರಗಾಲದ ಕಾರಣ ಪಂಪ್‌ಸೆಟ್ ಆಧರಿಸಿ ಕೃಷಿ ಮಾಡುವವರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ೨೮ ಸಾವಿರ ರೂ. ಇದ್ದ ವಿದ್ಯುತ್ ಸಂಪರ್ಕದ ಶುಲ್ಕವನ್ನು ಎರಡೂವರೆ ಲಕ್ಷ ರೂ.ಗೆ ಏರಿಸಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಪದಾಧಿಕಾರಿಗಳಾದ ನೇತ್ರಾವತಿ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಹೊಸೂರು ಕುಮಾರ್, ಕಲ್ಲಹಳ್ಳಿ ಜಯಣ್ಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.