ಮೈಸೂರು: ಲೋಕಾಯುಕ್ತ ಅಧಿಕಾರಿಗಳು ಎಷ್ಟೇ ಸಮರ್ಥರಿದ್ದರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಯನ್ನು ಎದುರಿಸಿಕೊಂಡು ಪ್ರಶ್ನಿಸಿ ಅವರ ವಿರುದ್ಧವೇ ಚಾರ್ಜ್ ಶೀಟ್ ಹಾಕುವಷ್ಟು ಎದೆಗಾರಿಕೆ ಲೋಕಾಯುಕ್ತಕ್ಕೆ ಇದೆ ಎಂಬಂತೆ ಅನ್ನಿಸಿಲ್ಲ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.24) ಮುಡಾ ಪ್ರಕರಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವರದಿ ಸಲ್ಲಿಸುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಗರಣದಲ್ಲಿ ಮುಖ್ಯಮುಂತ್ರಿಗಳ ಮೇಲೆ ದೋಷಾರೋಪ ಮಾಡಿ ಚಾರ್ಜ್ ಶೀಟ್ ಅನ್ನು ಲೋಕಾಯುಕ್ತದವರು ಹಾಕುತ್ತಾರೆಂದು ಅನ್ನಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಸಂಸ್ಥೆಯನ್ನು ಬಿಟ್ಟು, ಸಿಬಿಐ ತನಿಖೆಗೆ ಮುಡಾ ಹಗರಣವನ್ನು ವಹಿಸಬೇಕೆಂದು ಒತ್ತಾಯಿಸಿದ್ದೇವು ಎಂದರು.
ಲೋಕಾಯುಕ್ತ ಅಧಿಕಾರಿಗಳು ಅಪ್ಪಿತಪ್ಪಿ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿ ರಿಪೋರ್ಟ್ ನೀಡಿದ್ದರೆ, ಮೈಸೂರು ಲೋಕಾಯುಕ್ತ ಸಂಸ್ಥೆಯ ಮೇಲೆ ಗೌರವ ಉಳಿಯುವುದಿಲ್ಲ. ಅಲ್ಲದೇ ಈ ವಿಚಾರದಲ್ಲಿ ನ್ಯಾಯಮೂರ್ತಿಗಳೇ ಕೆಲವು ಫೈಡಿಂಗ್ ಮಾಡಿಕೊಂಡಿರುವುದರಿಂದ ಅದನ್ನು ಕೋರ್ಟ್‌ನಲ್ಲಿ ನ್ಯಾಯಾಧೀಶರು ನೋಡಿಕೊಳ್ಳುತ್ತಾರೆ. ಜೊತೆಗೆ ಲೋಕಾಯುಕ್ತ ಸಂಸ್ಥೆಯ ಮೇಲೆ ಸಾರ್ವಜನಿಕರು ನಂಬಿಕೆ ಕಳೆದುಕೊಳ್ಳುತ್ತಾರೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ನ್ಯಾಯಯುತವಾಗಿ ತನಿಖೆ ನಡೆಸಿ ವರದಿ ಸಲ್ಲಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.





