ತಿ.ನರಸೀಪುರ: ಜಿಲ್ಲಾ ಉಸ್ತುವಾರಿ ಸಚಿವರು ನಾಳೆ(ಗುರುವಾರ)ಯೇ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ನಡೆಸಿ ದಕ್ಷಿಣ ಭಾರತದ ಕುಂಭಮೇಳ ನಡೆಯುವ ತ್ರಿವೇಣಿ ಸಂಗಮದಲ್ಲಿನ ಪೂರ್ವಸಿದ್ಧತೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಅಂತಿಮ ರೂಪರೇಷೆಯನ್ನು ಸಿದ್ಧಪಡಿಸಲಿದ್ದಾರೆ ಎಂದು ಸಂಸದ ಸುನಿಲ್ ಬೋಸ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯ ಮೂರನೇ ಮಹಡಿಯಲ್ಲಿ ಬುಧವಾರ ಸಂಜೆ ಭೂ ಸುರಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಿರುಮಕೂಡಲಿನಲ್ಲಿ ಫೆ.೧೦, ೧೧ ಹಾಗೂ ೧೨ರಂದು ೩ ದಿನಗಳ ಕಾಲ ಆಯೋಜನೆಗೊಳ್ಳಲಿರುವ ಕುಂಭಮೇಳಕ್ಕೆ ದಿನಗಣನೆ ಆರಂಭವಾಗಿದ್ದರೂ ಯಾವುದೇ ಪೂರ್ವ ಸಿದ್ಧತೆ ಹಾಗೂ ಅಭಿವೃದ್ಧಿ ಕಾಮಗಾರಿ ಆರಂಭಗೊಳ್ಳದಿರುವ ಬಗ್ಗೆ ಗಮನ ಸೆಳೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾಳೆಯೇ ಸಿಎಂ ಸಭೆಗೆ ಸಮಯವನ್ನು ನೀಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭಾಗಿಯಾಗಿ ಸಿದ್ಧತಾ ಕಾರ್ಯಗಳನ್ನು ಅಂತಿಮಗೊಳಿಸಲಿದ್ದಾರೆ ಎಂದರು.
ತಾಲ್ಲೂಕು ಕಚೇರಿಯಲ್ಲಿ ಇನ್ನು ಮುಂದೆ ದಾಖಲೆಗಳ ಸುರಕ್ಷತೆಗಾಗಿ ಭೂ ದಾಖಲೆಗಳನ್ನು ಗಣಕೀಕೃತ ಯಂತ್ರದಲ್ಲಿ ದಾಖಲು ಮಾಡಲಾಗಿದ್ದು, ದಾಖಲೆಗಳ ಹುಡುಕಾಟ ನಡೆಸಲು ಕಾಲಾವಕಾಶ ಪಡೆಯಲಾಗುತ್ತಿತ್ತು. ಕೆಲವು ದಾಖಲೆಗಳು ಹಳೆಯದಾದ್ದರಿಂದ ಹುಡುಕಾಟದ ಸಂದರ್ಭದಲ್ಲಿ ಪುಟಗಳು ಹರಿದು ಹೋಗುತ್ತಿದ್ದವು. ಕಂಪ್ಯೂಟರ್‌ನಲ್ಲಿ ಅಳವಡಿಸಿರುವುದರಿಂದ ಎಲ್ಲಾ ದಾಖಲೆಗಳು ಯಥಾವತ್ತಾಗಿ ಸಾರ್ವಜನಿಕರಿಗೆ ಸಿಗಲಿವೆ ಎಂದು ಸುನಿಲ್ ಬೋಸ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಸದರು ಶಿಥಿಲಗೊಂಡಿರುವ ತಾಲ್ಲೂಕು ಆಡಳಿತ ಸೌಧದ ನೆಲ ಅಂತಸ್ತಿನ ಆವರಣವನ್ನು ದುರಸ್ತಿಗೊಳಿಸುವಂತೆ ಸ್ಥಳದಲ್ಲಿಯೇ ಇದ್ದ ಲೋಕೋಪಯೋಗಿ ಇಲಾಖೆ ಎಇಇ ಎಸ್.ಸತೀಶ್ ಚಂದ್ರನ್ ಅವರಿಗೆ ಸೂಚಿಸಿದರು.





