ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ನನಗೆ ಅಧಿಕ ದಾಖಲೆ ನೀಡಿದ್ದೇ ಕಾಂಗ್ರೆಸ್ ನಾಯಕರು ಎಂದು ದೂರುದಾರ ಸ್ನೇಹಮಯಿ ಕೃಷ್ಣ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.5) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಡಾ ಕೇಸ್ ವಿಚಾರಕ್ಕೆ ಸಂಬಂಧ ಕಳೆದ ಜನವರಿ ತಿಂಗಳಿನಿಂದ ಇಲ್ಲಿಯವರೆಗೂ ಅತಿ ಹೆಚ್ಚಿನ ದಾಖಲೆಗಳು ಕಾಂಗ್ರೆಸ್ ನಾಯಕರಿಂದ ಬಂದಿವೆ. ಅವರು ನೀಡಿರುವ ದಾಖಲೆಗಳಿಂದಲೇ ನನ್ನ ಹೋರಾಟದ ವೇಗ ಹೆಚ್ಚಾಗಿದೆ ಎಂದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ಬಗ್ಗೆ ಅಸಮಾಧಾನಗೊಂಡಿರುವ ನಾಯಕರು ಇದ್ದಾರೆ. ಆದರೆ ಪಕ್ಷದ ಒಳಗೆ ತೋರಿಸಲು ಅವರಿಗೆ ಆಗಲ್ಲ. ಹೀಗಾಗಿ ನನಗೆ ದಾಖಲೆ ನೀಡಿದ್ದಾರೆ. ಆದರೆ ನಾನು ಕಾಂಗ್ರೆಸ್‌ನ ಯಾವ ಹಂತದ ನಾಯಕರು ಹಾಗೂ ಅವರು ಯಾರು ಎಂಬುದನ್ನು ಹೇಳುವುದಿಲ್ಲ ಎಂದು ಹೇಳಿದರು.





