Mysore
18
scattered clouds

Social Media

ಬುಧವಾರ, 17 ಡಿಸೆಂಬರ್ 2025
Light
Dark

ಸ್ಮಿತಾರ ಕೊಳಲು ವಾದನಕ್ಕೆ ದಕ್ಕಿದ ಹಿರಿಮೆ

ಮೈಸೂರು : ಜಾಗತಿಕ ಮಟ್ಟದಲ್ಲಿ ಭಾರತದ ಮಹತ್ವವನ್ನು ಸಾರಿದ ಜಿ-20 ಶೃಂಗಸಭೆಯು ಸಾಂಸ್ಕೃತಿಕ ನಗರಿ ಮೈಸೂರಿನ ಮಹಿಳಾ ಕಲಾವಿದರೊಬ್ಬರ ಬದುಕಿಗೂ ಸಾರ್ಥಕತೆಯನ್ನು ಕಲ್ಪಿಸಿದೆ. ವಿದೇಶಗಳ ಗಣ್ಯ ಮಹೋದಯರೆದುರು ಅವರ ಸಂಗೀತ ಸಾಧನೆ ಅನಾವರಣಗೊಂಡಿತು.

ನಗರದ ಸರಸ್ವತಿಪುರಂ ನಿವಾಸಿಯಾಗಿರುವ ಮೈಸೂರು ಆಕಾಶವಾಣಿ ಪ್ರಥಮ ಶ್ರೇಣಿ ಕಲಾವಿದ (ಕೊಳಲು)ರಾದ ಸ್ಮಿತಾ ಶ್ರೀಕಿರಣ್ ಅವರೇ ಇಂತಹ ಅಪೂರ್ವ ಅವಕಾಶ ಪಡೆದವರು. ಸೆ.9 ಮತ್ತು 10ರಂದು ನಡೆದ ಶೃಂಗಸಭೆಯ ಮೊದಲ ದಿನ ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಮತ್ತು ಕನ್ವೆಷನ್ ಸೆಂಟರ್‌ನ ಭಾರತ್ ಮಂಟಪಮ್‌ನಲ್ಲಿ ದೇಶ ಎಲ್ಲ ರಾಜ್ಯಗಳಿಂದ 78 ಮಂದಿ ಒಟ್ಟಾಗಿ ಸಂಗೀತವನ್ನು ಸಾದರಪಡಿಸಿದರು.

ರಾಷ್ಟ್ರೀಯ ಸಂಗೀತ-ನಾಟಕ ಅಕಾಡೆಮಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅಮೆರಿಕ, ಜಪಾನ್, ಶ್ರೀಲಂಕಾ, ಜರ್ಮನಿ, ರಷ್ಯಾ ಮುಂತಾದ ಪ್ರತಿಷ್ಠಿತ ದೇಶಗಳ ನೇತಾರರ ಎದುರು ಸುವಾರು 3 ಗಂಟೆಗಳ ಕಾಲ ಈ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತಿಯೊಂದು ರಾಜ್ಯದವರು ಅವರವರ ಸಂಗೀತ ಕಲೆಯನ್ನು ಸಾಕ್ಷೀಕರಿಸಿದರು. ಸ್ಮಿತಾ ಅವರು ಪುರಂದರ ದಾಸರ ಭಾಗ್ಯದ ಲಕ್ಷ್ಮೀ ಬಾರಮ್ಮ ಕೀರ್ತನೆಯನ್ನು ಕೊಳಲಿನಲ್ಲಿ ನುಡಿಸುವ ಮೂಲಕ ಶ್ರೋತೃಗಳು ತಲೆದೂಗುವಂತೆ ಮಾಡಿದರು.

“ಆಂದೋಲನ”ದೊಂದಿಗೆ ವಾತನಾಡಿದ ಸ್ಮಿತಾ ಅವರು, ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನನ್ನನ್ನು ಆಕಾಶವಾಣಿ ಮೂಲಕ ಗುರುತಿಸಿ ಆಹ್ವಾನ ನೀಡಲಾಗಿತ್ತು. ಆ.30ರಂದು ಹೊಸದಿಲ್ಲಿಗೆ ತೆರಳಿದೆ. ಸೆ.8ರವರೆಗೂ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ತಾಲೀಮು ನಡೆಯುತ್ತಿತ್ತು. ಅದು ನನ್ನ ಅಪೂರ್ವ ಅನುಭವ ಆಗಿತ್ತು ಎಂದು ಭಾವುಕರಾಗಿ ನುಡಿದರು.

ಜಿ-20 ಶೃಂಗಸಭೆ ಆರಂಭದ ದಿನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು, ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಮತ್ತಿತರ ಕೇಂದ್ರ ಸರ್ಕಾರದ ಸಚಿವರು ಪಾಲ್ಗೊಂಡಿದ್ದಲ್ಲದೆ, ಕೊನೆಯ ಅರ್ಧ ಗಂಟೆ ಇರುವಾಗ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಗಮಿಸಿದ್ದು, ಅವರಿಗಾಗಿ ಇಡೀ ತಂಡ ವಿಶೇಷ ಸಂಗೀತ ಸಾದರಪಡಿಸಿದ್ದು, ನನ್ನ ಪಾಲಿಗೆ ಅವಿಸ್ಮರಣೀಯ
– ಸ್ಮಿತಾ ಶ್ರೀಕಿರಣ್, ಕೊಳಲು ವಾದಕರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!