ಮೈಸೂರು : ಮುಡಾ ಪ್ರಕರಣದ ಗೆಲುವಿನಿಂದಾಗಿ ತಂದೆಗೆ ರಾಜಕೀಯವಾಗಿ ಶಕ್ತಿ ವೃದ್ಧಿಸಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಅದೀಗ ನಿವಾರಣೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಪಕ್ಷದ ಶಾಸಕರು ನಮ್ಮ ತಂದೆಯ ಪರವಾಗಿದ್ದಾರೆ. ಹೀಗಿರುವಾಗ, ಅವರನ್ನೇಕೆ ಕೆಳಗಿಳಿಸಲಾಗಿತ್ತದೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಮುಂದುವರಿಯುತ್ತಾರೆಯೋ ಇಲ್ಲವೋ ಎಂಬ ಚರ್ಚೆಯೇ ಸರಿ ಇಲ್ಲ ಎಂದರು.
ತಲಾ ಎರಡುವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬುದು ವಿರೋಧ ಪಕ್ಷಗಳು ಸೃಷ್ಟಿಸಿರುವ ಚರ್ಚೆ. ಸೆಪ್ಟಂಬರ್ ರಾಜಕೀಯ ಕ್ರಾಂತಿ ಆಗುತ್ತದೆ ಎಂದು ಸಚಿವ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಎಂದರೆ ಅದು ಮುಖ್ಯಮಂತ್ರಿ ಬದಲಾವಣೆ ಎಂದರ್ಥವಾ? ಯಾಕೆ ಎಲ್ಲವನ್ನೂ ಸಿ.ಎಂ ವಿಚಾರಕ್ಕೆ ಸೀಮಿತವಾಗಿ ನೋಡುತ್ತೀರಿ? ಬೇರೆ ವಿಷಯದಲ್ಲಿ ಕ್ರಾಂತಿ ಆಗಬಹುದು. ಅದೇನು ಎಂಬುದನ್ನು ಹೇಳಿದವರನ್ನೇ ಕೇಳಬೇಕು ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್‌ನಲ್ಲಿ ಮಾಸ್‌ಲೀಡರ್ ಆಗಿರುವ ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ವಿರೋಧಪಕ್ಷದವರು ಟಾರ್ಗೆಟ್ ಮಾಡುತ್ತಿರುತ್ತಾರೆ. ಅವೆಲ್ಲವನ್ನೂ ಮೀರಿ ನಾವು ನಿಲ್ಲುತ್ತಿದ್ದೇವೆ ಎಂದು ತಿಳಿಸಿದರು.





