ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಗಬ್ಬೆದ್ದು ಹೋಗಿದ್ದು, ಹಗರಣ ಬಗ್ಗೆ ತನಿಖೆ ನಡೆಯುತ್ತಿದ್ದು, ತನಿಖಾ ವರದಿ ಬಂದ ಬಳಿಕ ಮುಡಾ ಕ್ಲೀನ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಜು.11) ಹೇಳಿದರು.
ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಡಾ ಕ್ಲೀನ್ ಮಾಡುವುದು ಒಂದು ಭಾಗ, ಅದು ನಮ್ಮ ಕಾಲದಲ್ಲಿ ಅಲ್ಲ ಮೊದಲಿನಿಂದಲೇ ಗಬ್ಬೆದ್ದು ಹೋಗಿದೆ. ಅದನ್ನು ಕ್ಲೀನ್ ಮಾಡುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿಂದಿನ ಬಿಜೆಪಿ ಅಧಿಕಾರಾವಧಿಯಲ್ಲಿ ಇದು ಗಬ್ಬೆದ್ದು ಹೋಗಿದ್ದು, ಅವರ ಕಾಲದಲ್ಲಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಅವರೇ ನಮಗೆ ಜಮೀನು ನೀಡಿದ್ದು ಎಂದು ಸಿಎಂ ಹೇಳಿದರು.
ಸಿಎಂ ಹೆಸರಿನ ಜತೆಯಲ್ಲಿ ಉಳಿದವರು ಬಚಾವ್ ಆಗುವ ಕೆಲಸ ಮಾಡುತ್ತಿದ್ದಾರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇಲ್ಲ ಈ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಮೇಯವಿಲ್ಲ. ಈ ಬಗ್ಗೆ ತನಿಖೆ ನಡೆಲಾಗವುದು. ನಮ್ಮ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ನಮ್ಮದು ಸ್ಕ್ಯಾಂಡಲ್ ಅಲ್ಲ. ಜಾಗ ಕಳೆದುಕೊಂಡವರಿಗೆ 50:50 ಅನುಪಾತದಲ್ಲಿ ನಿವೇಶನ ನೀಡುವಂತೆ ಮುಡಾ ಹೇಳಿದ್ದು, ಅದರಂತೆ ನಮಗೆ ಜಾಗ ಸಿಕ್ಕಿದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಹೊಟ್ಟೆ ಕಿಚ್ಚಿನಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ಇನ್ನು ಇದೇ ವೇಳೆ ಬಿಜೆಪಿ ಹೇಳಿಕೆಗಳ ಬಗ್ಗೆ ಮಾತನಾಡಿದ ಸಿಎಂ, ಹಿಂದುಳಿದ ವರ್ಗದ ಸಾಮನ್ಯ ವ್ಯಕ್ತಿ ಎರಡು ಬಾರಿ ಸಿಎಂ ಆಗಿದ್ದನ್ನು ಬಜೆಪಿ ಅವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನನ್ನ ವಿರುದ್ಧ ಷಡ್ಯಂತರ ರೂಪಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕೆಗಳಿಗೆ ತಿರುಗೇಟು ಕೊಟ್ಟರು.





