ಮೈಸೂರು: 50 ವರ್ಷಗಳ ಹಿಂದೆ ಚುನಾವಣಾ ರಾಜಕೀಯ ಪ್ರವೇಶಿಸಿದ ಪ್ರಸಾದ್ ಅವರು ಪ್ರಬುದ್ದ ರಾಜಕಾರಿಣಿಯಾಗಿ ಸಾರ್ವಜನಿಕರನ್ನು ಆಯಸ್ಕಾಂತದಂತೆ ಸೆಳೆದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಶ್ಲಾಘಿಸಿದರು.
ನಗರದ ಕೆಎಸ್‌ಓಯು ಘಟಿಕೋತ್ಸವ ಭವನದಲ್ಲಿ ಇತ್ತೀಚೆಗೆ ನಡೆದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1974ರಲ್ಲಿ ಡಿ.ದೇವರಾಜು ಅರಸು ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ನಾನು ಮತ್ತು ಅರಸು ಅವರು ಯುವ ನಾಯಕರಾಗಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧಿಸಿದ್ದ ಪ್ರಸಾದ್ ಅವರನ್ನು ಸೋಲಿಸಲು ಸ್ವಲ್ಪ ದಿನಗಳ ಕಾಲ ಮೈಸೂರಿನಲ್ಲಿಯೇ ಉಳಿದಿದ್ದೆವು. ಆ ಸಮಯದಲ್ಲಿ ನಮಗೆ ಪ್ರಸಾದ್ ಅವರ ಪ್ರಬುದ್ಧತೆ ಹಾಗೂ ವರ್ಚಸ್ಸು ಪರಿಚಯವಾಯಿತು ಎಂದು ಹೇಳಿದರು.
ಆಗಿನ ಕಾಲದಲ್ಲಿ ಚುನಾವಣೆ ನಡೆದರೆ ಸಾರ್ವಜನಿಕರೇ ಹಣ ನೀಡುತ್ತಿದ್ದರು. ಆ ಕಾಲದ ಸಮಯದಲ್ಲಿ ಚುನಾವಣಾ ಆಯೋಗವು ಶಿಸ್ತಿಗೆ ಬದ್ದವಾಗಿದ್ದು, ಆಯೋಗವೆಂದರೆ ಅಭ್ಯರ್ಥಿಗಳೇ ಭಯ ಪಡುತ್ತಿದ್ದರು ಎಂದರು.
ನಗರದ ಅಶೋಕಪುರಂಗೆ ಉಪ ಚುನಾವಣೆಯ ಸಂದರ್ಭದಲ್ಲಿ ಮತ ಕೇಳಲು ಹೋಗಿದ್ದಾಗ ಎಲ್ಲ ಮನೆಗಳಲ್ಲೂ ಅವರ ಬೆಂಬಲಿಗರೇ ಇರುತ್ತಿದ್ದರು. ಆ ಚುನಾವಣೆಯಲ್ಲಿ ಸೋಲು ಕಂಡರೂ ಕೂಡ ಅತಿ ಹೆಚ್ಚು ಮತಗಳನ್ನು ಪಡೆದು ರಾಜಕೀಯ ಪ್ರಜ್ಞಾವಂತರಾಗಿ ಚುನಾವಣೆಯ ನಾಯಕತ್ವಕ್ಕೆ ಭದ್ರ ಹಾಕಿಕೊಟ್ಟರು. ಹಾಗೆಯೇ 50ವರ್ಷದ ರಾಜಕೀಯ ಜೀವನದಲ್ಲಿ ತೆರೆದ ಪುಸ್ತಕವಿದ್ದಂತೆ ಜೀವಿಸಿದರು ಎಂದು ಹೇಳಿದರು.





