Mysore
20
overcast clouds
Light
Dark

ಧರ್ಮ ರಕ್ಷಣೆಗಾಗಿ ಜೀವನ ಮುಡುಪಿಟ್ಟ ಶಂಕರಾಚಾರ್ಯರು: ಶ್ರೀವತ್ಸ

ಮೈಸೂರು:  ಶಂಕರಾಚಾರ್ಯರು ವೇದ, ಉಪನಿಷತ್ತು, ವೇದಮಂತ್ರಗಳು, ದೇವರು ಸತ್ಯ ಎನ್ನುವುದನ್ನು ಜನರಲ್ಲಿ ಬಿಂಬಿಸಿ, ದೇಶ ಸಂಚರಿಸುತ್ತಾ ತಮ್ಮ ಜೀವನವನ್ನೇ ಧರ್ಮರಕ್ಷಣೆಗಾಗಿ ಮೀಸಲಿಟ್ಟ ಅವತಾರ ಪುರುಷ ಎಂದು ಶಾಸಕ ಶ್ರೀವತ್ಸ ಬಣ್ಣಿಸಿದರು.

ಇಂದು(ಮೇ.೧೩) ನಗರದ ವಿದ್ಯಾರಣ್ಯಪುರಂನಲ್ಲಿರುವ ಅವನಿ ಶಂಕರಮಠದಲ್ಲಿ ವಿಪ್ರ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿದ್ದ  ಆದಿ ಗುರು ಶ್ರೀ ಶಂಕರಾಚಾರ್ಯರ ಜಯಂತಿಯ ಅಂಗವಾಗಿ  ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಶಂಕರಾಚಾರ್ಯರು ತಮ್ಮ ಎಂಟನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿ, ದೇಶದ ಉದ್ದಗಲಕ್ಕೂ ಸಂಚರಿಸಿ ಸನಾತನ ಹಿಂದೂ ಸಂಸ್ಕೃತಿಯನ್ನು ಮರುಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಎಂದರು.

ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಮಾತನಾಡಿ ಶಂಕರಾಚಾರ್ಯರ ಬದುಕನ್ನು ಸಮಚಿತ್ತದಿಂದ ಅವಲೋಕಿಸಿದಾಗ ಮಾತ್ರ ಭಾರತೀಯ ಅಧ್ಯಾತ್ಮಿಕ ಪರಂಪರೆಗೆ ಅವರ ಕೊಡುಗೆ ಏನು ಎಂಬುದು ಅರಿವಾಗುವುದು ಎಂದು ಹೇಳಿದರು.

ಭವ್ಯ ಮೆರವಣಿಗೆ : ಆದಿ ಗುರು ಶ್ರೀ ಶಂಕರಾಚಾರ್ಯರ   ಭಾವಚಿತ್ರವನ್ನು ಅಲಂಕೃತ ವಾಹನದಲ್ಲಿರಿಸಿ ವಿದ್ಯಾರಣ್ಯಪುರಂ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು, ವಿಶೇಷವಾಗಿ ಮಕ್ಕಳು ಬಾಲ ಶಂಕರ ವೇಶವನ್ನು ಧರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ನಾದಸ್ವರ ಹಾಗೂ ಶಂಕರಾಚಾರ್ಯ ಕೀರ್ತನೆಗಳನ್ನು ಹೇಳುತ್ತಾ ಭಜನೆ, ದೇವರ ನಾಮ, ಸಂಕೀರ್ತಿಗಳನ್ನು ಹಾಡುತ್ತಾ ಮೆರವಣಿಗೆಯಲ್ಲಿ ನೂರಾರು ಭಕ್ಯಾದಿಗಳು ಸಾಗಿದ್ದು ಸಾರ್ವಜನಿಕರ ಗಮನ ಸೆಳೆಯಿತು.

ಹಿರಿಯ ಸಮಾಜ ಸೇವಕ ಕೆ ರಘುರಾಮ್ ವಾಜಪೇಯಿ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಮಾಜಿನಗರ ಪಾಲಿಕಾ ಸದಸ್ಯ ಮಾ ವಿ ರಾಮಪ್ರಸಾದ್, ವಿಪ್ರ ಸಂಗಮ ಅಧ್ಯಕ್ಷ ಡಾಕ್ಟರ್ ಲಕ್ಷ್ಮಿ, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಿಪ್ರ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಆರ್ ನಾಗರಾಜ್, ಕಾರ್ಯದರ್ಶಿ ಮುಳ್ಳೂರು ಸುರೇಶ್, ಸಹ ಕಾರ್ಯದರ್ಶಿ ಎಚ್ ಸಿ ಮುರುಗೇಶ್, ಖಜಾಂಜಿ ಎಂ ವಿ ಮಂಜುನಾಥ್, ಸುಚಿಂದ್ರ ತೀರ್ಥ, ಶ್ರೀಕಾಂತ್ ಕಶ್ಯಪ್  ಸೇರಿದಂತೆ ಮುಂತಾದವರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.