Mysore
21
overcast clouds
Light
Dark

ಸೆಸ್ಕ್‌: ವಿದ್ಯುತ್‌ ಅಪಘಾತಗಳ ಪ್ರಮಾಣ ಶೇ.70ರಷ್ಟು ಕುಸಿತ

ಮೈಸೂರು : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ವಿದ್ಯುತ್‌ ಅಪಘಾತಗಳ ಪ್ರಮಾಣ ಶೇ. 70ರಷ್ಟು ಕುಸಿದಿದೆ ಎಂದು ನಿಯಮಿತದ ಮುಖ್ಯ ಇಂಜಿನಿಯರ್‌ ಮಹದೇವಸ್ವಾಮಿ ಪ್ರಸನ್ನ ತಿಳಿಸಿದ್ದಾರೆ.

ವಿದ್ಯುತ್‌ ಸುರಕ್ಷತಾ ಸಪ್ತಾಹದ ( ಜೂನ್ 26ರಿಂದ ಜುಲೈ 2ರವರೆಗೆ) ಅಂಗವಾಗಿ ಕಡಕೊಳದಲ್ಲಿರುವ ಕೆಇಬಿಇಎ ತರಬೇತಿ ಕ್ರೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಸೆಸ್ಕ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, 2022-2023ನೇ ಸಾಲಿನಲ್ಲಿ 211  ವಿದ್ಯುತ್‌ ಅಪಘಾತಗಳು ಸಂಭವಿಸಿತ್ತು. 2023-24ರಲ್ಲಿ 138 ವಿದ್ಯುತ್‌ ಅಪಘಾತಗಳು ಮಾತ್ರ ಸಂಭವಿಸಿದ್ದು, ಒಟ್ಟಾರೆ ಅಪಘಾತಗಳ ಪ್ರಮಾಣದಲ್ಲಿ ಶೇ.35%ರಷ್ಟು ಕಡಿಮೆಯಾಗಿದೆ. ಪ್ರಾಣಾಪಾಯದ ಪ್ರಮಾಣ ಶೇ.70ರಷ್ಟು ಕಡಿಮೆ ಆಗಿದ್ದರೆ ಪ್ರಾಣಿಗಳ ಸಾವು ಶೇ.40ರಷ್ಟು ಕ್ಷೀಣೀಸಿದೆ,” ಎಂದು ತಿಳಿಸಿದ್ದಾರೆ.

“ವಿದ್ಯುತ್ ಸುರಕ್ಷತೆ ವಿಚಾರದಲ್ಲಿ ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂಬುದನ್ನು ನೆನಪಿಸಲು ಸುರಕ್ಷತಾ ಸಪ್ತಾಹ ಅತ್ಯಂತ ಮುಖ್ಯವಾಗಿದೆ. ಗ್ರಾಹಕರಿಗೆ ಗುಣಮಟ್ಟದ ನಿರಂತರ ವಿದ್ಯುತ್‌ ಪೂರೈಸುವ ಜತೆಗೆ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಬೇಕು. ಕಾರ್ಯ ನಿರ್ವಹಣೆ ವೇಳೆ ಸುರಕ್ಷತಾ ನಿಯಮ ಉಲ್ಲಂಘಿಸಿದ ಸಿಬ್ಬಂದಿಗೆ ದಂಡ ವಿಧಿಸುವ ಸಂಬಂಧ ಇತ್ತೀಚಿನ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸಿಬ್ಬಂದಿಯ ಸುರಕ್ಷತೆಯ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ,” ಎಂದು ಅವರು ತಿಳಿಸಿದರು.

ವಿದ್ಯುತ್‌ ಅವಘಡಗಳಿಗೆ ಪ್ರಮುಖ ಕಾರಣಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತಂತೆ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಜತೆಗೆ ನಾಟಕ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತದ ಅಪರ ಮುಖ್ಯ ಪರಿವೀಕ್ಷಕರಾದ ಎಚ್‌.ಎಸ್.‌ ವೆಂಕಟೇಶ್‌, ಅಧೀಕ್ಷಕ ಅಭಿಯಂತರರಾದ ಸುನೀಲ್‌, ಉಪ ಮುಖ್ಯ ಪರಿವೀಕ್ಷಕರಾದ ಅಲ್ತಾಫ್‌ ಹುಸೇನ್‌, ಸಂದೀಪ್‌, ರಘುಕುಮಾರ್‌ ಸೇರಿದಂತೆ ವಿದ್ಯುತ್‌ ಪರಿವೀಕ್ಷಕ ವಲಯದ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

“ರಾಷ್ಟ್ರೀಯ ವಿದ್ಯುತ್‌ ಸುರಕ್ಷತಾ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ನಮ್ಮ ಸಿಬ್ಬಂದಿಗೆ ಸುರಕ್ಷತೆಯ ಬಗ್ಗೆ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಗಿದೆ. ಇದೇ ರೀತಿ ನಮ್ಮ ಎಲ್ಲ ಉಪವಿಭಾಗಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಬೆಳಕು ನೀಡಲು ಶ್ರಮಿಸುವ ನಮ್ಮ ಸಿಬ್ಬಂದಿ ನಮಗೆ ಅಮೂಲ್ಯ. ವಿದ್ಯುತ್‌ ಅಪಘಾತಗಳು ಸಂಭವಿಸದಂತೆ ಎಲ್ಲ ಸುರಕ್ಷತಾ ಕ್ರಮ ಪಾಲಿಸಲಾಗುತ್ತದೆ. ನಮ್ಮ ಸೆಸ್ಕ್‌ ವ್ಯಾಪ್ತಿಯಲ್ಲಿ ವಿದ್ಯುತ್‌ ಅವಘಡಗಳ ಪ್ರಮಾಣ ಕಡಿಮೆಯಾಗಿರುವುದು ಸಮಾಧಾನಕರ ಅಂಶ,”
– ಶೀಲಾ, ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕರು

Tags: