Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಬಂಡಿಪಾಳ್ಯ ʻಎಪಿಎಂಸಿʼಯಲ್ಲಿ ಸರಣಿ ಕಳವು : ರೋಲಿಂಗ್ ಶಟರ್ ಮೀಟಿ ನಗದು,ಅಕ್ಕಿ ದೋಚಿದ ಕಳ್ಳರು

thift

ಮೈಸೂರು : ನಂಜನಗೂಡು ರಸ್ತೆಯಲ್ಲಿರುವ ಬಂಡಿಪಾಳ್ಳ ಎಪಿಎಂಸಿ ಯಾರ್ಡ್‌ನಲ್ಲಿ ಗುರುವಾರ ರಾತ್ರಿ ಕಳ್ಳರು ಮೂರು ಅಂಗಡಿಗಳ ರೋಲಿಂಗ್ ಶಟರ್‌ಗಳನ್ನು ಮೀಟಿ, ಅಂಗಡಿಗಳ ಒಳಗೆ ನುಗ್ಗಿ ನಗದು ಮತ್ತು ಅಕ್ಕಿ ಮೂಟೆಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಮಹಿಂದ್ರಾ ಮಿನಿ ಗೂಡ್ಸ್ ವಾಹನದಲ್ಲಿ ಬಂದಿರುವ ಕಳ್ಳರು, ಮೊದಲು ತಾಜ್ ಎಂಟರ್ ಪ್ರೈಸಸ್ ಅಂಗಡಿಯ ರೋಲಿಂಗ್ ಶಟರ್ ಅನ್ನು ಕಬ್ಬಿಣದ ಕಂಬ ಮತ್ತು ಮರದ ಕಂಬಗಳನ್ನು ಬಳಸಿ ಮೀಟಿ ಅಂಗಡಿ ಒಳಗೆ ನುಗ್ಗಿ ಅಲ್ಲಿದ್ದ ಕ್ಯಾಶ್ ಟೇಬಲ್ ಬೀಗ ಒಡೆದು ಸುಮಾರು ೧.೬೦ ಲಕ್ಷ ರೂ. ನಗದು ದೋಚಿದ್ದಾರೆ. ಬಳಿಕ ಎಳ್ಳಿನ ಮೂಟೆಯನ್ನು ಚೆಲ್ಲಾಡಿ ಕ್ಯಾಶ್ ಟೇಬಲ್ ಅನ್ನು ಕಾಳುಗಳ ಮೂಟೆಯ ಮೇಲೆ ಎಸೆದು ಹೋಗಿದ್ದಾರೆ. ಬಳಿಕ ಕಳ್ಳರು ಪಕ್ಕದಲ್ಲೇ ಇದ್ದ ರಾಘವೇಂದ್ರ ಟ್ರೇಡಿಂಗ್ ಕಂಪನಿ ಅಂಗಡಿಯ ರೋಲಿಂಗ್ ಶಟರ್ ಮೀಟಲು ಯತ್ನಿಸಿ ಅದು ಅಸಾಧ್ಯವಾದಾಗ ಮತ್ತೊಂದು ಅಕ್ಕಿ ಅಂಗಡಿಯ ರೋಲಿಂಗ್ ಶಟರ್ ಮೀಟಿ ಅಲ್ಲಿ ಸುಮಾರು ೨೦ಕ್ಕೂ ಹೆಚ್ಚು ಅಕ್ಕಿ ಮೂಟೆಗಳನ್ನು ಕಳವು ಮಾಡಿದ್ದಾರೆ.

ಕಳ್ಳರು ಅಕ್ಕಿ ಅಂಗಡಿಗೆ ನುಗ್ಗಿ ಕಳವು ಮಾಡುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೂವರು ಕಳ್ಳರು ಅಂಗಡಿ ಒಳಗೆ ನುಗ್ಗಿ ಕ್ಯಾಶ್ ಟೇಬಲ್‌ನಲ್ಲಿ ಹುಡುಕಾಟ ನಡೆಸುತ್ತಿರುವ ದೃಶ್ಯ ಮತ್ತು ಉರ್ದು ಭಾಷೆಯಲ್ಲಿ ಪರಸ್ಪರ ಬೈದಾಡಿಕೊಳ್ಳುತ್ತಿರುವ ಮಾತುಗಳೂ ಸಹ ಸ್ಪಷ್ಟವಾಗಿ ಕೇಳಿಸುತ್ತಿದೆ.

ಈ ಹಿಂದೆ ನಂಜನಗೂಡಿನಲ್ಲಿ ಕಳುವು ಮಾಡಿದ ತಂಡದಿಂದಲೇ ಇಲ್ಲೂ ಕಳ್ಳತನ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂಜನಗೂಡು ತಾಲೂಕು ತಗಡೂರು ಗ್ರಾಮದ ವೈನ್‌ಸ್ಟೋರ್‌ನಲ್ಲಿ ನಡೆದ ಕಳುವು ಪ್ರಕರಣದಲ್ಲಿ ಭಾಗಿಯಾಗಿರುವ ತಂಡವೇ ಬಂಡೀಪಾಳ್ಯದಲ್ಲೂ ಕೃತ್ಯವೆಸಗಿದೆ ಎಂದು ಶಂಕಿಸಲಾಗಿದೆ.

ಎರಡು ಪ್ರಕರಣಗಳಲ್ಲೂ ಒಂದೇ ರೀತಿ ಕೃತ್ಯವೆಸಗಿದ್ದಾರೆ. ಕಬ್ಬಿಣದ ರಾಡ್‌ಗಳಿಂದಲ್ಲೇ ರೋಲಿಂಗ್ ಶೆಟರ್‌ಗಳನ್ನ ಮೀಟಿರುವುದು ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಸಧ್ಯ ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸರು ಜಾಲ ಬೀಸಿದ್ದಾರೆ.

ಅಸಮರ್ಪಕ ಪೊಲೀಸ್ ಬೀಟ್ ವ್ಯವಸ್ಥೆ ಬಂಡಿಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿ ಈ ಹಿಂದೆಯೂ ಹಲವು ಕಳ್ಳತನಗಳು ನಡೆದಿದೆ. ಕಳ್ಳರು ಕದಿಯುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರೂ, ಪೊಲೀಸರು ಕಳ್ಳರನ್ನು ಬಂಧಿಸಿಲ್ಲ, ಇದೊಂದು ಕೊಟ್ಯಾಂತರ ರೂ. ವ್ಯವಹಾರ ನಡೆಸುವ ವಾಣಿಜ್ಯ ಕೇಂದ್ರವಾಗಿದ್ದರೂ ಇಲ್ಲಿ ಸಮಪರ್ಕವಾದ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲ ಎಂದು ಅಂಗಡಿಗಳ ಮಾಲೀಕರು ಬೇಸರ ವ್ಯಕ್ತಪಡಿಸಿದರು.

Tags:
error: Content is protected !!