ಹುಣಸೂರು: ನಗರದ ಬೈಪಾಸ್ ರಸ್ತೆಯ ಕಲ್ಕುಣಿಕೆ ವೃತ್ತದಲ್ಲಿ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮೈಸೂರಿನಿಂದ ಕಬ್ಬಿಣ ತುಂಬಿಸಿಕೊಂಡು ಬರುತ್ತಿದ್ದ ಜೀಪ್ ಕಲ್ಕುಣಿಕೆ ವೃತ್ತದ ಬಳಿ ನಡೆದು ಕೊಂಡು ಹೋಗುತ್ತಿದ್ದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ನಿವಾಸಿ ಪುಟ್ಟೇಗೌಡ (೫೮) ಎಂಬವರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಾಹನದಲ್ಲಿ ತುಂಬಿಸಿದ್ದ ಕಬ್ಬಿಣದ ರಾಡ್‌ಗಳು ಪುಟ್ಟೇಗೌಡ ಅವರ ಮೇಲೆ ಬಿದ್ದು, ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ನಗರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ತಿಳಿಸಿದ್ದಾರೆ.
ಮತ್ತೊಂದು ಪ್ರಕರಣ: ಬುಧವಾರ ರಾತ್ರಿ ಶುಂಠಿ ತುಂಬಿಸಿಕೊಂಡು ತೆರಳುತ್ತಿದ್ದ ಜೀಪ್ ಚಾಲಕನ ಹತೋಟಿ ತಪ್ಪಿ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಕಲ್ಕುಣಿಕೆ ನಿವಾಸಿ ಶಿವರಾಜು (೨೨) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.





