ಮೈಸೂರು: ಇಲ್ಲಿನ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಇದೇ ಮೊದಲ ಬಾರಿಗೆ ರೋಗಿಯೊಬ್ಬರಿಗೆ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ ಮೆಟ್ರಾನಿಕ್ ಸೆಲ್ಫ್ ಎಕ್ಸ್‌ಪೆಂಡಿಂಗ್ ಅಯೋರ್ಟಿಕ್ ಕವಾಟವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದೆ.
ಕೊಳ್ಳೇಗಾಲದ ೮೧ ವರ್ಷದ ನಿವೃತ್ತ ಉಪನ್ಯಾಸಕರಾದ ಚನ್ನಮಾದೇಗೌಡ ಅವರಿಗೆ ಡಾ.ಬಿ. ದಿನೇಶ್, ಡಾ.ಪ್ರಶಾಂತ್ ದ್ವೀವೇದಿ ನೇತೃತ್ವದ ತಂಡ ಯಶಸ್ವಿಯಾಗಿ ಅಯೋರ್ಟಿಕ್ ಕವಾಟವನ್ನು ಅಳವಡಿಸಿದೆ. ತಂಡದಲ್ಲಿ ಡಾ.ವೈ.ಎಸ್ ಶ್ರೀಮಂತ್, ಡಾ.ಜೆ ಸ್ನೇಹಲ್, ಡಾ.ಭಾರತಿ, ಡಾ.ನಿಶ್ಚಿತ್, ಡಾ. ಮಧುಪ್ರಕಾಶ್, ಡಾ.ಚಂದನ್, ಡಾ.ಮಿಥುನ್, ತಾಂತ್ರಿಕ ಸಿಬ್ಬಂದಿಗಳಾದ ನಾಗರಾಜ್, ಸುಮ, ಶಾಂತ ಹಿರಿಯ ಶುಶ್ರೂಷಾಧಿಕಾರಿ ಹರೀಶ್ ಕುಮಾರ್ ಇದ್ದರು.
ಜಯದೇವ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆಯಿಲ್ಲದೆ ಮೆಟ್ರಾನಿಕ್ ಸೆಲ್ಫ್ ಎಕ್ಸ್‌ಪೆಂಡಿಂಗ್ ಅಯೋರ್ಟಿಕ್ ಕವಾಟವನ್ನು ಅಳವಡಿಸಲಾಗಿದೆ. ವಯಸ್ಸಾದವರಿಗೆ ಹಾಗೂ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗದವರಿಗೆ ಈ ರೀತಿಯ ಚಿಕಿತ್ಸೆ ಮಾಡಲಾಗುತ್ತದೆ. ತೊಡೆಯ ರಕ್ತನಾಳದ ಮೂಲಕ ಅಯೋರ್ಟಿಕ್ ಕವಾಟವನ್ನು ಹೃದಯಕ್ಕೆ ಜೋಡಿಸಲಾಗುತ್ತದೆ. ಈ ಚಿಕಿತ್ಸೆಗಾಗಿ ೧೬ ಲಕ್ಷ ವೆಚ್ಚವಾಗುತ್ತದೆ ಎಂದು ಜಯದೇವ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್ ಸದಾನಂದ ತಿಳಿಸಿದರು.





