ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೈಸೂರು ನಗರ ಪಾಲಿಕೆಗೆ ಸೇರಿದ ನೂರಾರು ಹಳೆ ವಾಹನಗಳು ಬಹಳ ವರ್ಷಗಳಿಂದ ನಿಂತಲ್ಲೇ ನಿಂತು ತುಕ್ಕು ಹಿಡಿದು ಹಾಳಾಗುತ್ತಿವೆ.
ಹೌದು, ನಗರದ ಸೂಯೇಜ್ ಫಾರಂ ಕಸ ವಿಲೇವಾರಿ ಘಟಕದ ಬಳಿ ಪಾಲಿಕೆಯ ವಾಹನಗಳನ್ನು ಅವಶೇಷಗಳಂತೆ ಮೂಲೆಗೆ ತಳ್ಳಲಾಗಿದೆ. ಕೆಟ್ಟ ವಾಹನಗಳನ್ನು ಹೀಗೆ ಮೂಲೆಗೆ ತಳ್ಳಿ ಹೊಸ ವಾಹನಗಳನ್ನು ಖರೀದಿ ಮಾಡುವ ಪಾಲಿಕೆ ಅಧಿಕಾರಿಗಳು ಹಳೇ ವಾಹನಗಳ ನಿರ್ವಹಣೆ ಮರೆತು ಬಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ನಿರುಪಯುಕ್ತವಾಗಿ ನಿಂತಿರುವ ವಾಹನಗಳನ್ನು ದುರಸ್ತಿ ಮಾಡಿಸದೇ ಅಥವಾ ಹರಾಜಿಗೂ ಹಾಕದೇ ನಿರ್ಲಕ್ಷ್ಯ ವಹಿಸಲಾಗಿದ್ದು ಇದರಿಂದ ಕೋಟ್ಯಾಂತರ ಮೌಲ್ಯದ ಸರ್ಕಾರಿ ಆಸ್ತಿ ನಾಶವಾಗುತ್ತಿದೆ.
ಕಸ ಸಂಗ್ರಹ ವಾಹನ, ಕಚೇರಿ ಬಳಕೆ ವಾಹನ, ಟ್ರಾಕ್ಟರ್, ಜೀಪು, ಟೆಂಪೋ, ಟಿಪ್ಪರ್‌ಗಳಂಥ ನೂರಾರು ವಾಹನಗಳಿದ್ದು ಇವುಗಳು ದುರಸ್ತಿಯಾಗದಿದ್ದರೆ ಇದರ ಹರಾಜು ಪ್ರಕ್ರಿಯೆ ಮಾಡಬೇಕು. ಇದರಿಂದ ಪಾಲಿಕೆಗೆ ಕೋಟ್ಯಾಂತರ ಆದಾಯವೂ ಸಿಗಲಿದೆ. ಯಾವುದನ್ನೂ ಮಾಡದೆ ಹಳೆ ವಾಹನಗಳನ್ನು ಈ ರೀತಿ ಬಿಟ್ಟಿರುವುದು ನಿಜಕ್ಕೂ ನಿರ್ಲಕ್ಷ್ಯ ಧೋರಣೆಯಲ್ಲದೇ ಬೇರೇನಲ್ಲ.
ಇನ್ನಾದರೂ ಪಾಲಿಕೆ ಅಧಿಕಾರಿಗಳು ಹೀಗೆ ನಶಿಸಿ ಹೋಗುತ್ತಿರುವ ವಾಹನಗಳ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸರ್ಕಾರಿ ಆಸ್ತಿಯ ರಕ್ಷಣೆಗೆ ಮುಂದಾಗಬೇಕಿದೆ.





