ಮೈಸೂರು: ಬೇಕರಿಯಲ್ಲಿ ತಿಂದ ತಿನಿಸುಗಳಿಗೆ ಹಣ ಕೇಳಿದ್ದಕ್ಕಾಗಿ ದಾಂಧಲೆ ನಡೆಸಿ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದಿರುವ ಘಟನೆ ನಗರದ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದೆ.
ಇಲ್ಲಿನ ಕೃಷ್ಣಾ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಮದ್ ಸಾಜಿದ್ ಎಂಬುವವರ ಮೇಲೆ ಪುಡಿ ರೌಡಿಗಳು ಚಾಕುವಿನಿಂದ ದಾಳಿ ಮಾಡಿದ್ದಾರೆ. ರೌಡಿ ಶೀಟರ್‌ಗಳಾದ ಪ್ರಜ್ವಲ್ ಹಾಗೂ ಸಂಜು ಎಂಬುವವರು ದಾಳಿ ಮಾಡಿದ ಆರೋಪಿಗಳಾಗಿದ್ದಾರೆ. ಅದೃಷ್ಟವಶಾತ್ ಸಾಜಿದ್ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಶನಿವಾರ ರಾತ್ರಿ 10ಗಂಟೆ ವೇಳೆಯಲ್ಲಿ ಬೇಕರಿಗೆ ಬಂದ ಪ್ರಜ್ವಲ್ ಹಾಗೂ ಸಂಜು ಚಂಪಾಕಲಿ, ಪಪ್ಸ್ ಪಡೆದು ಹೊರ ನಡೆಯಲು ಮುಂದಾಗಿದ್ದಾರೆ. ತಿಂದ ಪದಾರ್ಥಗಳಿಗೆ ಹಣ ಕೇಳಿದ್ದಕ್ಕೆ ಏಕಾಏಕಿ ಸಾಜಿದ್ ಮೇಲೆ ದಾಳಿ ಮಾಡಿದ್ದಾರೆ.
ಬಳಿಕ ಸಾಜಿದ್ ಬಳಿಯಿದ್ದ ಮೂವತ್ತು ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜು ಬಂಧನವಾಗಿದ್ದು, ಪ್ರಜ್ವಲ್ ತಲೆ ಮರೆಸಿಕೊಂಡಿದ್ದಾರೆ.