Mysore
14
scattered clouds

Social Media

ಬುಧವಾರ, 07 ಜನವರಿ 2026
Light
Dark

ನಂಜನಗೂಡು: ಪೊಲೀಸ್ ಠಾಣೆ ಪಕ್ಕದಲ್ಲೇ ಸರಣಿ ಕಳ್ಳತನ: ಪಟ್ಟಣದಲ್ಲಿ ಆತಂಕ

ನಂಜನಗೂಡು: ಪಟ್ಟಣದಲ್ಲಿ ಸರಣಿ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಗರವಾಸಿಗಳಲ್ಲಿ ಆತಂಕ ಮೂಡಿಸಿದೆ.
ನಗರದ ಆರ್.ಪಿ. ರಸ್ತೆಯಲ್ಲಿರುವ ಸುಮಾರು 14 ರಿಂದ 16 ಅಂಗಡಿಗಳಲ್ಲಿ ಕಳ್ಳತನ ಹಾಗೂ ಕಳ್ಳತನಕ್ಕೆ ಯತ್ನ ನಡೆದಿರುವ ಘಟನೆ ಕಳೆದ ತಡರಾತ್ರಿ ಸಂಭವಿಸಿದೆ.

ಪಟ್ಟಣ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಬಾಯ್ಸ್ ಮಿಡಲ್ ಶಾಲೆಯ ಆವರಣದಲ್ಲಿನ ಹಾಲಿನ ಡೈರಿಯಲ್ಲಿ ಸುಮಾರು 2 ಸಾವಿರ ರೂ. ನಗದು ಕಳ್ಳತನವಾಗಿದ್ದು, ಎದುರಿನ ಕೋಳಿ ಮಾರಾಟದ ಅಂಗಡಿಗಳಲ್ಲಿ ಇದ್ದ ಅಲ್ಪ ಪ್ರಮಾಣದ ಹಣವೂ ಕಳ್ಳರ ಪಾಲಾಗಿದೆ.

ಇದಲ್ಲದೆ, ನಾಲ್ಕನೇ ಕ್ರಾಸ್‌ನ ಅಪ್ಪು ಸ್ಟೋರ್, ಅಕ್ಷಯ ಫುಟ್‌ವೇರ್, 6ನೇ ಕ್ರಾಸ್‌ನ ಅಶ್ವಿನಿ ಬೇಕರಿ, ನಂಜುಂಡೇಶ್ವರ ಡಿಟಿಎಚ್ ಹಾಗೂ ವಿಡಿಯೋ ಅಂಗಡಿ ಸೇರಿದಂತೆ ಹಲವೆಡೆ ಬೀಗ ಮುರಿದು ಕಳ್ಳತನಕ್ಕೆ ಯತ್ನ ಮಾಡಲಾಗಿದೆ.
ಕೆಲವು ಅಂಗಡಿಗಳಲ್ಲಿ ಸರಕಿಗೆ ಹಾನಿಯಾಗಿರುವ ಮಾಹಿತಿ ದೊರೆತಿದೆ.

ಕಳ್ಳತನಕ್ಕೆ ಯತ್ನಿಸುತ್ತಿರುವ ಖದೀಮನ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿವೆ. ಪೊಲೀಸ್ ಠಾಣೆಯ ಸಮೀಪದಲ್ಲೇ ಈ ರೀತಿಯ ಸರಣಿ ಕಳ್ಳತನ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಪಟ್ಟಣದಲ್ಲಿ ಭದ್ರತೆ ಹೆಚ್ಚಿಸುವಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

 

Tags:
error: Content is protected !!