ಮೈಸೂರು: ಮೈಸೂರು-ಬೆಂಗಳೂರು ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ನಾಲ್ವರು ಖದೀಮರನ್ನು ಮೈಸೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ. 11ರಂದು ಮಧ್ಯರಾತ್ರಿ ರೈಲಿನಲ್ಲಿ ಈ ದರೋಡೆ ಪ್ರಕರಣ ನಡೆದಿತ್ತು. ಮದ್ದೂರು ಸಮೀಪ ರೈಲಿಗೆ ಹತ್ತಿದ್ದ ಈ ದರೋಡೆಕೋರರು ಮಲಗಿದ್ದ ಚಂದನ್ ಎಂಬುವವರ ಮೇಲೆ ಹಲ್ಲೆ ಮಾಡಿ, ಬಟನ್ ಚಾಕು ತೋರಿಸಿ ಅವರ ಬಳಿಯಿದ್ದ ಹಣ, ಮೊಬೈಲ್ ಫೋನ್ ಕಿತ್ತುಗೊಂಡಿದ್ದರು. ಅಲ್ಲದೇ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗಗನ್ ಹಾಗೂ ಶಿವಾನಂದ್ ಸೇರಿ ಹಲವರ ಮೇಲೂ ಹಲ್ಲೆ ನಡೆಸಿದ ನಂತರ ಚನ್ನಪಟ್ಟಣ ರೈಲ್ವೆ ಸ್ಟೇಷನ್ ಬಳಿ ಇಳಿದು ಪರಾರಿಯಾಗಿದ್ದರು.
ಈ ಘಟನೆ ನಡೆದ ಮರುದಿನವೇ ಮೈಸೂರು ರೈಲ್ವೆ ಪೊಲೀಸರರಿಗೆ ಪ್ರಯಾಣಿಕ ಚಂದನ್ ದೂರು ನೀಡಿದ್ದರು. ಈ ದೂರಿನ ಅನ್ವಯ ರೈಲ್ವೆ ನಿಲ್ದಾಣಗಳ ಸಿಸಿಟಿವಿ ಆಧರಿಸಿ ಕಾರ್ಯಾಚರಣೆ ನಡೆಸಿದ ಮೈಸೂರು ರೈಲ್ವೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿಗಳನ್ನು ಶೈಕ್ ಸೋಹ್ಮಲ್, ಸೋಹೈಲ್ ಖಾನ್, ಮೊಹಮ್ಮದ್ ಯಾಸೀನ್ ಹಾಗೂ ೧೭ ವರ್ಷದ ಅಪ್ರಾಪ್ತ ಯುವಕ ಎಂದು ಗುರುತಿಸಲಾಗಿದೆ. ಅಲ್ಲದೇ ಬಂಧಿತ ಆರೋಪಿಗಳಿಂದ 6,885 ರೂ. ನಗದು ಹಣ ಮತ್ತು ಬೆಲೆ ಬಾಳುವ ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.