ಮೈಸೂರು : ಇಲ್ಲಿನ ವಿಜಯನಗರದ ನಾಲ್ಕನೇ ಹಂತದಲ್ಲಿ ರಸ್ತೆ ಬದಿ ಕಸ ಸುರಿಯುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ ರಸ್ತೆ ಬದಿ ಕಸದ ರಾಶಿ ಹಾಗೂ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ಬಗೆಹರಿಸಲು ಸಮಾಗಮ ವೆಲ್ಫೇರ್ ಸಂಸ್ಥೆಯು ಕ್ಲೀನ್ ಮೈಸೂರು ಸೇವ್ ಫ್ಯೂಚರ್ ಎಂಬ ಘೋಷವಾಕ್ಯದಡಿ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.
ಭಾನುವಾರ ವಿಜಯನಗರದ ಮೈಲಾರಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಭಿತ್ತಿ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಮಾತನಾಡಿದ ವಿಜಯನಗರ ನಿವಾಸಿಗಳ ಸಂಘದ ಅಧ್ಯಕ್ಷ ರಾಮಕೃಷ್ಣ ಗೌಡ, ಇತ್ತೀಚಿನ ದಿನಗಳಲ್ಲಿ ನಾಲ್ಕನೇ ಹಂತದಲ್ಲಿ ತ್ಯಾಜ್ಯದ ನಿರ್ವಹಣೆ ಸಮಸ್ಯೆಯು ಹೆಚ್ಚಾಗುತ್ತಿದ್ದು ನಗರಸಭೆಯ ಕಸ ಸಂಗ್ರಹಣ ವಾಹನ ಮನೆಯ ಬಳಿ ಬಂದರು ಕೆಲವರು ಸಾರ್ವಜನಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕುತ್ತಿದ್ದಾರೆ ಎಂದು ಬೇಸರಿಸಿದರು.
ಹೀಗೆ ಎಲ್ಲೆಂದರಲ್ಲಿ ಕಸದ ರಾಶಿ ಎಸೆಯುವುದರಿಂದ ಮುಂಜಾನೆ ವಾಕಿಂಗ್ ಬರುವವರು ಮೂಗು ಮುಚ್ಚಿಕೊಂಡು ಓಡಾಡುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ನಿವಾಸಿಗಳು ಕಸವನ್ನು ಮನೆಯ ಬಳಿ ಬರುವ ಕಸದ ವಾಹನಕ್ಕೆ ಕಸ ನೀಡಿ ಎಂದು ಹೇಳಿದರು.
ಪರಿಸರ ಸಂರಕ್ಷಣೆ ದೃಷ್ಠಿಯಿಂದ ಸಮಾಗಮ ವೆಲ್ಫೇರ್ ಸಂಸ್ಥೆಯು ಇಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಪ್ರಸ್ತುತ ಅತ್ಯಾವಶ್ಯಕವಾಗಿದೆ. ನಮ್ಮ ಮೈಸೂರು ಸ್ವಚ್ಛ ಮೈಸೂರಗಲೂ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ಸಮಾಗಮ ವೆಲ್ಫೇರ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಪಾಂಡು ಎಸ್, ಸಾರ್ವಜನಿಕರಲ್ಲಿನ ಪರಿಸರ ಕಾಳಜಿಯ ಕೊರತೆ ಹಾಗೂ ನಿರ್ಲಕ್ಷ ಮನೋಭಾವನೆಯಿಂದ ತ್ಯಾಜ್ಯದ ಸಮಸ್ಯೆ ಉಲ್ಬಣಗೊಳ್ಳುತ್ತಿದೆ, ಜಾಗೃತಿ ನೀಡುವ ಸಲುವಾಗಿ ಬಿತ್ತಿ ಪತ್ರಿಕೆಯನ್ನು ಪ್ರತಿ ಮನೆಮನೆಗೂ ತಲುಪಿಸಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಮುಂದಿನ ವಾರದೊಳೆಗೆ ಪ್ರತಿ ಮನೆ ಮನೆಗೂ ಭಿತ್ತಿ ಪತ್ರವನ್ನು ಹಂಚಿ, ಅರಿವು ಮೂಡಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು. ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ನಿವಾಸಿಗಳು ಭಾವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರೊ. ಆನಂದ್, ನಿರ್ದೇಶಕ ಶಂಭುಲಿಂಗೇಗೌಡ, ಡಿ ಎಲ್ ಮಂಜುನಾಥ್, ಸದಸ್ಯರುಗಳಾದ ನಂಜುಂಡ, ನಿವೃತ್ತ ಡಿ.ವೈ.ಎಸ್.ಪಿ, ಡಾ. ಪುಟ್ಟಸ್ವಾಮಿ, ಪಾಂಡು, ರಾಜಶೇಖರ್ ಮತ್ತು ಸಮಾಗಮ ವೆಲ್ಫೇರ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕರಾದ ಸುಮಿತ್ರ, ರಾಘವೇಂದ್ರ ಸ್ವಾಮಿ, ಶಿವಕುಮಾರ್ ಸ್ಥಳೀಯರಾದ ನಾರಾಯಣಸ್ವಾಮಿ ಹಾಜರಿದ್ದರು.