ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ತಾಲ್ಲೂಕಿನ ಜಯಪುರ ಹೋಬಳಿ ಸೋಲಿಗರ ಕಾಲೋನಿಯ ನಿವಾಸಿ ನಾರಾಯಣ ಎಂಬವರ ಮಗ ಶ್ರೀನಿವಾಸ್(55) ಎಂಬವರೇ ಅಪಘಾತದಲ್ಲಿ ಮೃತಪಟ್ಟವರು.
ಅವರು ಗುರುವಾರ ಸಂಜೆ ಮೈಸೂರಿನಿಂದ ತಮ್ಮ ಊರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಎಚ್.ಡಿ.ಕೋಟೆ ರಸ್ತೆಯ ಬೆಳ್ಳಿ ಕೊಳಗ ಎಸ್ಟೇಟ್ ಬಳಿಯ ರಸ್ತೆಯಲ್ಲಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್ ಸಮೇತ ಕೆಳಗೆ ಬಿದ್ದ ಶ್ರೀನಿವಾಸ್ ಅವರ ತಲೆಯ ಭಾಗಕ್ಕೆ ಗಂಭೀರ ಪೆಟ್ಟಾದ ಕಾರಣ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಚಾಲಕ ಬಸ್‌ನೊಂದಿಗೆ ಸ್ಥಳದಿಂದ ತೆರಳಿದ್ದಾನೆ.
ಸ್ಥಳೀಯರು ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಠಾಣೆ ಪೊಲೀಸರು, ಯಾವ ಡಿಪೋ ಬಸ್ ಡಿಕ್ಕಿ ಹೊಡೆದಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ.





