ಮೈಸೂರು : ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಸಂಶೋಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ, ಜೊತೆಗೆ ಸಂಶೋಧನೆಗೆ ಕಡಿಮೆ ಹಣವನ್ನು ವೆಚ್ಚ ಮಾಡಲಾಗುತ್ತಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ದೇವೇಗೌಡ ವೃತ್ತದಲ್ಲಿರುವ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಅಂತರಶಾಖಾ ಸಂಶೋಧನೆಯಲ್ಲಿ, ಸಂಶೋಧನಾ ಸಾಮರ್ಥ್ಯ ವೃದ್ಧಿ ಹಾಗೂ ಯೋಜನಾ ಪ್ರಸ್ತಾವನೆ ತಯಾರಿಕೆ’ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಅಪಾರ ಸಂಖ್ಯೆಯ ಪ್ರತಿಭಾವಂತ ಯುವ ವಿಜ್ಞಾನಿಗಳು ಇದ್ದಾರೆ. ತಮ್ಮ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಶಕ್ತಿ ಹೊಂದಿದ್ದಾರೆ. ಆದರೆ, ಯುವ ಶಕ್ತಿ ನಮ್ಮಲ್ಲಿ ಹೆಚ್ಚು ಬಳಕೆ ಆಗುತ್ತಿಲ್ಲ ಎಂದು ವಿಷಾದಿಸಿದರು.
ಭಾರತವು ಜಗತ್ತಿನ ಶೇ.೬೦ ರಷ್ಟು ಲಸಿಕೆ ಪೂರೈಕೆಯನ್ನು ಮಾಡುತ್ತಿದೆ. ಇದು ನಮ್ಮ ವೈಜ್ಞಾನಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯು ಆಯೋಜಿಸಿರುವ ಕಾರ್ಯಾಗಾರ ಶ್ಲಾಘನೀಯವಾಗಿದೆ. ಈ ರೀತಿಯ ವೇದಿಕೆಗಳನ್ನು ಕಲ್ಪಿಸುವ ಮೂಲಕ ವಿಜ್ಞಾನ ಹಾಗೂ ಸಂಶೋಧನೆಯನ್ನು ಜೀವನದ ಭಾಗವಾಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಜಿ.ಬಿ.ಪಂತ್, ರಾಷ್ಟ್ರೀಯ ಹಿಮಾಲಯ ಪರಿಸರ ಸಂಸ್ಥೆಯ ಪ್ರೊ.ಸುನಿಲ್ ನೌಟಿಯಾಲ್ ಹಾಗೂ ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆಯ ಮುಖ್ಯ ವಿಜ್ಞಾನಿಗಳಾದ ಡಾ. ಪ್ರಕಾಶ್ ಎಲ್.ಹಲಾಮಿ ಅವರು ಅಂತರಶಾಖಾ ಸಂಶೋಧನೆ ಮತ್ತು ಪರಿಣಾಮಕಾರಿಯಾದ ಯೋಜನಾ ಪ್ರಸ್ತಾವನೆ ತಯಾರಿಯ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ್ ಮಾತನಾಡಿ, ಸಂಶೋಧನೆ ಎನ್ನುವುದು ಜೀವನ ಪರಿವರ್ತನೆಯ ಸಾಧನವಾಗಿದ್ದು, ಅದರ ಪ್ರಯೋಜನವನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು. ಯುವ ಮನಸ್ಸುಗಳಲ್ಲಿ ಸಂಶೋಧನಾ ಚಿಂತನೆಯನ್ನು ಬೆಳೆಸುವುದು ಹಾಗೂ ನಿಷ್ಠೆ ಮತ್ತು ಶ್ರಮದೊಂದಿಗೆ ಕೆಲಸ ಮಾಡಲು ಪ್ರೇರೇಪಿಸುವುದು ವಿದ್ಯಾ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಪ್ರೊ.ಎಸ್.ಶ್ರೀಕಂಠಸ್ವಾಮಿ, ಕಾವೇರಿ ಹೃದಯ ಹಾಗೂ ಬಹು ವಿಶೇಷ ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಕರಾದ ಡಾ.ಆರ್.ಎಂ.ಅರವಿಂದ್, ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ವರ್ಗ, ಕಾವೇರಿ ಸಮೂಹ ಶಿಕ್ಷಣ ಸಂಸ್ಥೆಯ ಸುಮಾರು ೨೦೦ಕ್ಕೂ ಹೆಚ್ಚು ಅಧ್ಯಾಪಕ ವೃಂದದವರು ಭಾಗವಹಿಸಿದ್ದರು.





