ಮೈಸೂರು: ಬೆಂಗಳೂರು ವಿಶ್ವವಿದ್ಯಾನಿಲಯ ಬೋಧಕರ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಮೈಸೂರಿನ ಖ್ಯಾತ ಮೂಳೆ ರೋಗ ಶಸ್ತ್ರ ಚಿಕಿತ್ಸಕ ಡಾ.ಎನ್.ನಿತ್ಯಾನಂದರಾವ್ ಅವರ ಹಿರಿಯ ಸಹೋದರ ಡಾ.ಎನ್.ಮನಮೋಹನ್‌ರಾವ್ (85) ಅವರು ಬುಧವಾರ ಬೆಂಗಳೂರಿನಲ್ಲಿ ನಿಧನರಾದರು.
ಮೃತರಿಗೆ ಪತ್ನಿ ಭಾರತಿ, ಪುತ್ರಿಯರಾದ ಸುಮನ ಮತ್ತು ಸಹನಾ, ಅಳಿಯಂದಿರು, ಸಹೋದರರು, ಸಹೋದರಿ, ಬಂಧು-ಬಳಗ ಇದ್ದಾರೆ.
ಬೆಂಗಳೂರು ಬನಶಂಕರಿಯಲ್ಲಿರುವ ಮುಕ್ತಿಧಾಮದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೈಸೂರು ಎನ್‌ಐಇ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಡಾ.ಎನ್.ಮನಮೋಹನ್ ರಾವ್ ಅವರು ಕಾನ್ಪುರ ಐಐಟಿಯಲ್ಲಿ ತಮ್ಮ ಎಂ.ಟೆಕ್ ಮತ್ತು ಪಿಎಚ್.ಡಿ ಪದವಿಯನ್ನು ಪೂರ್ಣಗೊಳಿಸಿದ್ದರು. ಬೆಂಗಳೂರು ವಿವಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಬೋಧಕರಾಗಿ ಅವರು ಸೇವೆ ಸಲ್ಲಿಸಿದ್ದರು.
ತುಮಕೂರಿನ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದರು. ಬೆಂಗಳೂರು ವಿವಿಯ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿ, ಬಿಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮೈಸೂರು ಎನ್‌ಐಇ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಎನ್‌ಐಇ ಕಾಲೇಜಿನಲ್ಲಿ ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸುವಲ್ಲಿ ಮುಖ್ಯ ಪಾತ್ರವಹಿಸಿದ್ದರು.