ಗ್ರಾಹಕರ ಕುಂದುಕೊರತೆಗಳ ನಿವಾರಣೆ ಕುರಿತ ಕಾನೂನು ಕಾರ್ಯಾಗಾರದಲ್ಲಿ ಶಾಸಕ ಸಲಹೆ
ಮೈಸೂರು : ಗ್ರಾಹಕರ ಕುಂದುಕೊರತೆಗಳನ್ನು ಅಧಿಕಾರಿಗಳ ಹಂತದಲ್ಲೇ ಬಗಹರಿಸುವ ಇಚ್ಛಾಶಕ್ತಿ ತೋರಿಸಿದರೆ ಅವುಗಳ ನಿವಾರಣೆಗಾಗಿ ನ್ಯಾಯಾಲಯ ಅಥವಾ ಇನ್ನಿತರ ಆಯೋಗಗಳ ಮೊರೆ ಹೋಗುವುದು ತಪ್ಪಲಿದೆ ಎಂದು ಶಾಸಕರೂ ಆಗಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದ್ದಾರೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಮತ್ತು ಸೆಸ್ಕ್ ಸಹಯೋಗದಲ್ಲಿ ಕಡಕೊಳದಲ್ಲಿರುವ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಹಕರ ಕುಂದುಕೊರತೆಗಳ ನಿವಾರಣಾ ವೇದಿಕೆ ಅಧ್ಯಕ್ಷರು, ಸದಸ್ಯರು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾನೂನು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
“ಗ್ರಾಹಕರ ಕುಂದುಕೊರತೆಗಳನ್ನು ಕಾನೂನಾತ್ಮಕವಾಗಿ ಯಾವ ರೀತಿಯಲ್ಲಿ ಬಗೆಹರಿಸಬೇಕೆಂಬ ಕುರಿತು ಮಾಹಿತಿ ನೀಡಲು ಈ ಕಾರ್ಯಾಗಾರದ ಹಮ್ಮಿಕೊಳ್ಳಲಾಗಿದೆ. ಯಾವುದೇ ಗ್ರಾಹಕರಿಗೆ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅದರ ಪರಿಹಾರಕ್ಕಾಗಿ ತಮ್ಮ ಕೈಗೆಟುವ ಹಂತದ ಹಂತದ ಅಧಿಕಾರಿಗಳಿಗೆ ಮನವಿ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸಕಾರಾತ್ಮಕ ಮನಸ್ಥಿತಿಯಲ್ಲಿ ಕೆಲಸ ಮಾಡಿ, ಸಮಸ್ಯೆ ಪರಿಹರಿಸಿದರೆ, ಗ್ರಾಹಕರ ಕುಂದುಕೊರತೆಗಳು ಶೀಘ್ರವೇ ಇತ್ಯರ್ಥವಾಗಲಿದೆ” ಎಂದರು.
“ಆದರೆ, ಕುಂದುಕೊರತೆಗಳನ್ನು ನಿವಾರಿಸುವಲ್ಲಿ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಲು ಹಿಂದೇಟು ಹಾಕಿದರೆ, ಅಂತಹ ಸಂದರ್ಭಗಳಲ್ಲಿ ಗ್ರಾಹಕರು ನ್ಯಾಯಾಲಯದ ಮೆಟ್ಟಿಲು ಏರಬೇಕಾದ ಪರಿಸ್ಥಿತಿ ಉಂಟಾಗಲಿದ್ದು, ಇಂತಹ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಯೂ ಇಚ್ಛಾಶಕ್ತಿಯಿಂದ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸಿದರೆ ಗ್ರಾಹಕರ ದೂರುಗಳು ಆಯೋಗದ ಹಂತಕ್ಕೆ ಕೊಂಡೊಯ್ಯುವ ಸಂದರ್ಭಗಳು ನಿವಾರಣೆಯಾಗಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಬದ್ಧತೆಯೊಂದಿಗೆ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿರುವ ಪರಿಣಾಮ ಈ ಭಾಗದಲ್ಲಿ ಗ್ರಾಹಕರ ಕುಂದುಕೊರತೆಯ ಸಮಸ್ಯೆಗಳು ಕಡಿಮೆ ಇದೆ” ಎಂದು ಹೇಳಿದರು.
ಕಾನೂನಿನ ಅರಿವು ಇರಬೇಕು:
ಕಾರ್ಯಾಗಾರ ಉದ್ಘಾಟಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಸದಸ್ಯರಾದ ಎಚ್.ಕೆ.ಜಗದೀಶ್ ಅವರು ಮಾತನಾಡಿ, “ವಿದ್ಯುಚ್ಛಕ್ತಿ ಇಂದು ಪ್ರತಿಯೊಬ್ಬರ ಜೀವನದಲ್ಲಿ ಅನಿವಾರ್ಯವಾಗಿದೆ. ದೇಶದಲ್ಲಿ ವಿದ್ಯುಚ್ಛಕ್ತಿ ಸಂಬಂಧಿಸಿದಂತೆ ಕಾನೂನುಗಳು ಹೇಗಿತ್ತು ಎಂದು ಅರಿತು, ಅವಲೋಕಿಸಿದರೆ ಗ್ರಾಹಕರ ಕುಂದುಕೊರತೆಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ದೇಶದಲ್ಲಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದಂತೆ 1887ರಲ್ಲಿ ಮೊದಲ ಬಾರಿಗೆ ಕಾನೂನು ಜಾರಿಗೆ ತರಲಾಯಿತು. ಬ್ರಿಟಿಷರ ಆಳ್ವಿಕೆಯಲ್ಲಿ ಜಾರಿಗೊಳಿಸಲಾದ ಈ ಕಾನೂನಿನಲ್ಲಿ ಜೀವ ರಕ್ಷಣೆಗಾಗಿ ಕೆಲವು ಸೆಕ್ಷನ್‌ಗಳನ್ನು ಅಳವಡಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ವಿದ್ಯುತ್ ಉತ್ಪಾದನೆಗೆ ಹಲವು ಕ್ಷೇತ್ರಗಳು ಮತ್ತು ಆವಿಷ್ಕಾರಗಳು ಹುಟ್ಟಿಕೊಂಡ ಪರಿಣಾಮ ಕಾಲಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾವಣೆಗೊಂಡಿತು” ಎಂದರು.
ಕಾಲಕಾಲಕ್ಕೆ ಬದಲಾವಣೆ:
“ವಿದ್ಯುತ್ ಕ್ಷೇತ್ರದಲ್ಲಿ ಆದಂತ ಬೆಳವಣಿಗೆಗಳನ್ನು ಗಮನಿಸಿ ಕಾನೂನುಗಳು ಕೂಡ ಬದಲಾಗುತ್ತಾ ಬಂದಿವೆ. ಅದರಂತೆ 2003ರ ಕಾಯ್ದೆ ಅಡಿಯಲ್ಲಿ ಇಂದು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರ ವ್ಯಾಪಕವಾಗಿ ವಿಸ್ತರಣೆ ಆಗಿದ್ದು, ಎಲ್ಲ ಕ್ಷೇತ್ರಗಳಿಂದಲೂ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿ ಉತ್ಪಾದನೆ, ಪ್ರಕರಣ ಹಾಗೂ ಸರಬರಾಜಿನ ಜೊತೆಗೆ ಗ್ರಾಹಕರು ಕಾಯ್ದೆಗೆ ಸೇರ್ಪಡೆ ಆಗಿದ್ದಾರೆ” ಎಂದರು.
ಗ್ರಾಹಕ ತೃಪ್ತನಾಗಬೇಕು:
“ಕುಂದುಕೊರತೆಗಳನ್ನು ಯಾವ ರೀತಿಯಲ್ಲಿ ನಿರ್ವಹಿಸಬೇಕು ಎಂಬುದನ್ನು ಅಧಿಕಾರಿಗಳು ಅರಿತಿರಬೇಕು. ತಮ್ಮ ಕಾರ್ಯವ್ಯಾಪ್ತಿಯ ಅಧಿಕಾರದಲ್ಲಿ ಕುಂದುಕೊರತೆಗಳನ್ನು ಸರಿಯಾಗಿ ನಿರ್ವಹಣ ಮಾಡದೆ ಹೋದಲ್ಲಿ, ಹೈಕೋರ್ಟ್‌ವರೆಗೂ ಹೋಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿಮ್ಮ ಕಾರ್ಯವ್ಯಾಪ್ತಿ, ಯಾವ ಕಾನೂನು ಏನನ್ನು ಹೇಳಲಿದೆ, ಯಾವ ಕಾನೂನು ಅನ್ವಯಿಸಬೇಕು ಎಂಬುದನ್ನು ಅರಿತು ನ್ಯಾಯ ಕಲ್ಪಿಸುವ ಮೂಲಕ ಗ್ರಾಹಕನನ್ನು ತೃಪ್ತಿಗೊಳಿಸಬೇಕು. ಯಾವ ಗ್ರಾಹಕ ತನಗೆ ಸಿಗುತ್ತಿರುವ ಸೇವೆ ಮೂಲಕ ತೃಪ್ತಿ ಹೊಂದುತ್ತಾನೆ ಆಗ ಯಾವುದೇ ಕುಂದುಕೊರತೆ ಇರುವುದಿಲ್ಲ. ನೀವು ನೀಡುವ ಸೇವೆ ತೃಪ್ತಿದಾಯಕವಾಗಿಲ್ಲದಿದ್ದರೆ ಆಗ ಸಮಸ್ಯೆ ಎದುರಾಗಲಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿ ಸಿದ್ದೇಶ್ವರ್, ಮೈಸೂರು ವಲಯದ ಮುಖ್ಯ ಇಂಜಿನಿಯರ್ ಡಿ.ಜೆ.ದಿವಾಕರ್, ಹಾಸನ ವಲಯದ ಮುಖ್ಯ ಇಂಜಿನಿಯರ್ ಹರೀಶ್ ಕುಮಾರ್, ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕ, ಪ್ರಧಾನ ವ್ಯವಸ್ಥಾಪಕಿ(ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಆಂತರಿಕ ಲೆಕ್ಕ ಪರಿಶೋಧಕಿ ನಿಂಗರಾಜಮ್ಮ ಇತರರಿದ್ದರು.
ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಕಾರ್ಯಾಗಾರದಲ್ಲಿ ವಿದ್ಯುತ್ ಸರಬರಾಜಿನ ನಿಯಮಗಳು ಮತ್ತು ಕಾರ್ಯಕ್ಷಮತೆಯ ಮಾನದಂಡಗಳು ವಿಷಯ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ತಾಂತ್ರಿಕ ನಿರ್ದೇಶಕ ಶ್ರೀನಿವಾಸಪ್ಪ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ನಿಯಮಗಳ ಕುರಿತು ಆಯೋಗದ ನ್ಯಾಯಾಧೀಶರು ಹಾಗೂ ಕಾನೂನು ಸಲಹೆಗಾರರಾದ ಐ.ಎಫ್.ಬಿದರಿ ಹಾಗೂ ಕೆಇಆರ್‌ಸಿ ನಿಯಮಗಳು 2004 ವಿಷಯದ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಜಿಲ್ಲಾ ನ್ಯಾಯಾಧೀಶರಾದ ಎನ್. ಕೃಷ್ಣಯ್ಯ ಅವರುಗಳು ಮಾಹಿತಿ ನೀಡಿದರು. ಬಳಿಕ ಸಂವಾದ ಮತ್ತು ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.





