ಮೈಸೂರು: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್‌ನಿಂದ ಸುಪಾರಿ ಪಡೆದು ಸ್ವಪಕ್ಷವಾದ ಬಿಜೆಪಿ ವಿರುದ್ಧವೇ ಹೋರಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಇಂದು(ನ.30) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸೋಲಿಗೆ ಯತ್ನಾಳ್ ಅವರೇ ನೇರ ಕಾರಣ.ಅವರು ಹಿಂದುತ್ವದ ಮುಖವಾಡ ಧರಿಸಿ, ವಿಜಯಪುರದ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಹಿಟ್ಲರ್ ರೀತಿ ವರ್ತಿಸುತ್ತಿದ್ದಾರೆ. ಒಂದೇ ಪಕ್ಷದಲ್ಲಿದ್ದುಕೊಂಡು ಮುಡಾ ಪಾದಯಾತ್ರೆಗೆ ಹಾಗೂ ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆಗೆ ಬರಲಿಲ್ಲ. ಹೀಗಾಗಿ ಯತ್ನಾಳ್ ಪರೋಕ್ಷವಾಗಿ ಭ್ರಷ್ಟಾಚಾರವನ್ನು ಬೆಂಬಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸ್ವಪಕ್ಷದ ಇಂತಹ ಶಕುನಿಗಳು ಮತ್ತು ಮೀರ್ ಸಾಧಕರು ಪ್ರತಿನಿತ್ಯ ಕಾಟ ಕೊಡುತ್ತಲೇ ಇದ್ದಾರೆ. ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ಘಟಕದ ರಾಜ್ಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಹೈಕಮಾಂಡ್ ಹೊರತು ಯಡಿಯೂರಪ್ಪ ಅಲ್ಲ. ಒಂದು ವೇಳೆ ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ನಿಂದಿನಿಸಿದರೆ ಬಿಜೆಪಿ ಹೈಕಮಾಂಡ್ ನಿಂದಿಸಿದಂತೆ ಎಂದು ಹೇಳಿದ್ದಾರೆ.
ಬಸವಣ್ಣ ಅವರು ಎಲ್ಲ ವರ್ಗದವರಿಗೆ ಸೇರಿದ ವಿಶ್ವಗುರು. ಅಂತಹವರಿಗೆ ಅಪಮಾನ ಮಾಡಿದ ಯತ್ನಾಳ್‌ರ ವಿರುದ್ಧ ಮಠಾಧೀಶರು ಛೀಮಾರಿ ಹಾಕಬೇಕು. ಬಿಜೆಪಿ ಪಕ್ಷದಲ್ಲಿ ವಿಜಯೇಂದ್ರ ಒಂದು ಶಕ್ತಿಯಾಗಿದ್ದಾರೆ. ಆದರೆ ಯತ್ನಾಳ್ ಅವರದ್ದು ನಾಲ್ಕು ಜನರ ಒಂದು ಗುಂಪು ಅಷ್ಟೇ. ನಾವೆಲ್ಲರೂ ಬಣ ರಾಜಕೀಯ ಮಾಡುತ್ತಿಲ್ಲ. ಅದರ ಬದಲಾಗಿ ಶಕ್ತಿ ಪ್ರದರ್ಶನ ಮಾಡುತ್ತಿದ್ದೇವೆ . ಹೀಗಾಗಿ ತಾಯಿ ಚಾಮುಂಡೇಶ್ವರಿ ಅವರು ಅದಷ್ಟು ಬೇಗ ಇಂತಹ ಆಂತರಿಕ ದುಷ್ಟರನ್ನು ಸಂಹಾರ ಮಾಡಲಿ ಎಂದು ತಿಳಿಸಿದ್ದಾರೆ.