ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, 7ಯುವತಿಯರು ಸೇರಿದಂತೆ 50ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ(ಸೆ.28) ತಡರಾತ್ರಿ ಕೆಆರ್‌ಎಸ್ ಬ್ಯಾಕ್ ವಾಟರ್‌ನ ಮೀನಾಕ್ಷಿಪುರದ ಜಮೀನಿನೊಂದರಲ್ಲಿ ಈ ರೇವ್ ಪಾರ್ಟಿ ಆಯೋಜನೆಯಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
50 ಮಂದಿ ವಶಕ್ಕೆ
ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಎಂಟ್ರಿ ಕೊಟ್ಟ ಪೊಲೀಸರು ಯುವತಿಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಜತೆಗೆ ಸ್ಥಳದಲ್ಲಿದ್ದ 15 ಕಾರು, 20ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಸಾಮಾಜಿಕ ಜಾಲಾತಾಣದಲ್ಲಿ ಈ ಪಾರ್ಟಿಯ ಬಗ್ಗೆ ಪ್ರಚಾರ ಮಾಡಿ ಸುಮಾರು 25ಕ್ಕೂ ಹೆಚ್ಚು ಜೋಡಿಗಳನ್ನು ಪಾರ್ಟಿಗೆ ನೊಂದಾಯಿಸಿದ್ದ ಎನ್ನಲಾಗಿದೆ. ಶನಿವಾರ ತಡರಾತ್ರಿ ಪಾರ್ಟಿ ಆರಂಭವಾಗಿದೆ. ಪಾರ್ಟಿಗೆ ಇಸ್ರೇಲ್‌ನಿಂದ ರ್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದರು. ಅಲ್ಲದೆ, ಆಯೋಜನಕರು ಪಾರ್ಟಿಗೆ ಒಬ್ಬರಿಗೆ 2ಸಾವಿರ ರೂ. ನಿಗದಿ ಮಾಡಿದ್ದರು ಎನ್ನಲಾಗಿದೆ.
ಮಾಹಿತಿ ಅರಿತ ಪೊಲೀಸರು ಎಸ್ಪಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ಅಪರ ಪೊಲೀಸ್ ಎಸ್ಪಿ ನಾಗೇಶ್, ಡಿವೈಎಸ್ಪಿ ಕರೀಂ ರಾವತರ್ ಹಾಘೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಪೊಲೀಸರ ಹಲ್ಲೆಗೆ ಮುಂದಾದ ತಂಡ
ಪೊಲೀಸರು ಏಕಾಏಕಿ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ಯುವಕ, ಯುವತಿಯರು ಓಡಿಹೋಗಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಯುವಕ,ಯುವತಿಯ ವೈದ್ಯಕೀಯ ತಪಾಸಣೆ
ವಶಪಡಿಸಿಕೊಂಡಿರುವ ಯುವಕ, ಯುವತಿಯರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಪಾರ್ಟಿಗೆ ಬಳಸಿದ್ದ ಸಂಗೀತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.