Mysore
18
overcast clouds

Social Media

ಗುರುವಾರ, 08 ಜನವರಿ 2026
Light
Dark

ರಂಗಾಯಣ | ಜ.11ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ; 24 ನಾಟಕಗಳ ಪ್ರದರ್ಶನ

ಮೈಸೂರು : ರಂಗಾಯಣದ ಮಹತ್ವಾಕಾಂಕ್ಷೆಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವೇದಿಕೆ ಸಜ್ಜಾಗುತ್ತಿದ್ದು, ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಆಶಯದಡಿ ಜ.11 ರಿಂದ 18ರವರೆಗೆ ನಾಟಕೋತ್ಸವ ಆಯೋಜಿಸಲಾಗಿದೆ.

ರಂಗಾಯಣದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬುಧವಾರ ಬಹುರೂಪಿ ನಾಟಕೋತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಜ.11ರಿಂದ ಆರಂಭವಾಗುವ ಬಹುರೂಪಿ ನಾಟಕೋತ್ಸವ ಈ ಬಾರಿ 8 ದಿನಗಳ ಕಾಲ ರಂಗಾಸಕ್ತರನ್ನು ಮನರಂಜಿಸಲಿದೆ. ಬಹುಭಾಷಾ ನಾಟಕೋತ್ಸವ, ವಿಚಾರ ಸಂಕಿರಣ, ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸಿ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ ಹಾಗೂ ಮಕ್ಕಳ ನಾಟಕೋತ್ಸವ ರಂಗೋತ್ಸವದಲ್ಲಿ ಇರಲಿದೆ ಎಂದು ಮಾಹಿತಿ ನೀಡಿದರು.

ಬಹುರೂಪಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷವಾಗಿ ಆಯೋಜನೆ ಮಾಡಲಾಗಿದೆ. ‘ಬಾಬಾ ಸಾಹೇಬ್-ಸಮತೆಯೆಡೆಗೆ ನಡಿಗೆ’ ಈ ಬಾರಿಯ ನಾಟಕೋತ್ಸವದ ಆಶಯವಾಗಿದ್ದು, ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಬೇಡ್ಕರ್‌ರ ಜೀವನ-ಯಶೋಗಾಥೆ ಕುರಿತು ಬೆಳಕು ಚೆಲ್ಲುವ ನಾಟಕಗಳ ಪ್ರದರ್ಶನ ಇರಲಿದೆ. ಈ ಬಾರಿಯೂ ಮಕ್ಕಳ ರಂಗಭೂಮಿಯನ್ನು ಉತ್ತೇಜಿಸುವ ಉದ್ದೇಶದಿಂದ ಮಕ್ಕಳ ನಾಟಕೋತ್ಸವ ನಡೆಸಲಾಗುತ್ತಿದೆ. ನಾಟಕೋತ್ಸವಕ್ಕೆ ಸರ್ಕಾರದಿಂದ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ. ಕಳೆದ ಬಾರಿ 25 ಲಕ್ಷ ರೂ.ಅನುದಾನ ದೊರೆತಿತ್ತು ಎಂದು ಹೇಳಿದರು.

ಬಹುರೂಪಿ ಕಾರ್ಯಕ್ರಮಗಳಿವು
ಜ.11ರಂದು ಚಲನಚಿತ್ರೋತ್ಸವದ ಉದ್ಘಾಟನೆಯೊಂದಿಗೆ ಈ ಬಾರಿಯ ಬಹುರೂಪಿ ಚಾಲನೆ ಪಡೆದುಕೊಳ್ಳಲಿದೆ. ಅಂದು ಬೆಳಿಗ್ಗೆ 10.30ಕ್ಕೆ ಭೂಮಿಗೀತದಲ್ಲಿ ಬರಹಗಾರ ಬರಗೂರು ರಾಮಚಂದ್ರಪ್ಪ ಚಲನಚಿತ್ರೋತ್ಸವ ಉದ್ಘಾಟಿಸುವರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಸಂಜೆ 6 ಗಂಟೆಗೆ ಕಿಂದರಿ ಜೋಗಿ ಆವರಣದಲ್ಲಿ ಜನಪದ ಸಂಭ್ರಮಕ್ಕೆ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಡಾ.ದುರ್ಗಾದಾಸ್ ಚಾಲನೆ ನೀಡುವರು.

12 ರಂದು ಬೆಳಿಗ್ಗೆ 10.30ಕ್ಕೆ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿಯನ್ನು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹೀದಾ, ರಂಗ ಸಮಾಜದ ಸದಸ್ಯರಾದ ಡಾ.ಕೆ.ರಾಮಕೃಷ್ಣಯ್ಯ, ಮಹಾಂತೇಶ್ ಗಜೇಂದ್ರಗಡ ಭಾಗವಹಿಸುವರು.

ನಾಟಕೋತ್ಸವದ ಅಧಿಕೃತ ಉದ್ಘಾಟನೆಯನ್ನು 12 ರಂದು ಸಂಜೆ 5.30 ಕ್ಕೆ ವನರಂಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಾರತೀಯ ರಂಗಭೂಮಿಯ ಹಿರಿಯ ಕಲಾವಿದೆ ಹೈಸ್ನಾಂ ಸಾವಿತ್ರಿ ದೇವಿ ಗಂಗೋತ್ಸವಕ್ಕೆ ಚಾಲನೆ ನೀಡುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುರೂಪಿ ಉದ್ಘಾಟಿಸುವರು. ಪುಸ್ತಕ, ಕರಕುಶಲ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದು, ರಂಗಸಂಚಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಬಿಡುಗಡೆ ಮಾಡುವರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಾಬಾ ಸಾಹೇಬ್ ಛಾಯಾಚಿತ್ರ ಪ್ರದರ್ಶನ, ಸಂಸದ ಸುನೀಲ್ ಬೋಸ್ ಚಿತ್ರಕಲಾ ಪ್ರದರ್ಶನ ಅನಾವರಣ ಮಾಡುವರು. ಶಾಸಕ ಕೆ.ಹರೀಶ್ ಗೌಡ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಹೈಸ್ನಾಂ ಸಾವಿತ್ರಿ ದೇವಿ ಅವರಿಗೆ ‘ಬೆಳ್ಳಿ ಬಹುರೂಪಿ’ ರಂಗಗೌರವ ನೀಡಲಾಗುವುದು ಎಂದು ಮಾಹಿತಿ ನೀಡಿದರು.

17, 18ರಂದು ವಿಚಾರ ಸಂಕಿರಣ:
ಜ.17, 18ರಂದು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. 17ರಂದು ಬೆಳಿಗ್ಗೆ 10.30ಕ್ಕೆ ಹೊಸದಿಲ್ಲಿಯ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದು, ಎಂಎಲ್‌ಸಿ ಯತೀಂದ್ರ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಡಾ.ಕೆ.ರಾಕೇಶ್ ಕುಮಾರ್ ಭಾಗವಹಿಸುವರು.

24 ನಾಟಕಗಳ ಪ್ರದರ್ಶನ
ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ ಮಹಾರಾಷ್ಟ್ರ, ಮಣಿಪುರ, ತಮಿಳುನಾಡು, ಅಸ್ಸಾಂ, ಕೇರಳ ರಾಜ್ಯಗಳ 5 ನಾಟಕಗಳು, ಕನ್ನಡ ಭಾಷೆಯ 12 ನಾಟಕಗಳು, ತುಳು ಭಾಷೆಯ 2, ಹಿಂದಿ-ಇಂಗ್ಲಿಷ್ ಭಾಷೆಯ 5 ನಾಟಕಗಳು ಸೇರಿದಂತೆ ಒಟ್ಟು 24 ನಾಟಕಗಳು ಭೂಮಿಗೀತ, ವನರಂಗ, ಕಲಾಮಂದಿರ ಮತ್ತು ಕಿರುರಂಗಮಂದಿರ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಚಲನಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ 21 ಚಲಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರ ಜತೆಗೆ ವಿವಿಧ ಜಿಲ್ಲೆಗಳ ಜಾನಪದ ಕಲಾತಂಡಗಳು ಕಿಂದರಜೋಗಿ ಆವರಣದಲ್ಲಿ ಪ್ರದರ್ಶನ ನೀಡಲಿವೆ. ನಾಟಕ ವೀಕ್ಷಣೆಗೆ 100 ರೂ ಟಿಕೆಟ್ ದರವಿದ್ದು, ಗುರುವಾರದಿಂದಲೇ ಟಿಕೆಟ್ ಮಾರಾಟ ಆರಂಭವಾಗಲಿದೆ. 70 ಮಳಿಗೆಗಳಲ್ಲಿ ಪುಸ್ತಕ, ಕರಕುಶಲ ವಸ್ತುಗಳು, ಆಹಾರ ಮೇಳ ಆಯೋಜಿಸಲಾಗಿದೆ.

 

Tags:
error: Content is protected !!