Mysore
26
clear sky

Social Media

ಗುರುವಾರ, 22 ಜನವರಿ 2026
Light
Dark

ರಂಗಾಯಣ : ಚಿಣ್ಣರ ಮೇಳಕ್ಕೆ ಸಂಭ್ರಮದ ಚಾಲನೆ

ಮೈಸೂರು : ನಗರದ ಕಲಾಮಂದಿರದ ಆವರಣದಲ್ಲಿರುವ ರಂಗಾಯಣದಲ್ಲಿ ‘ಬಾಲ್ಯ ಅಮೂಲ್ಯ’ ಶೀರ್ಷಿಕೆಯಡಿ ಆಯೋಜಿಸಿರುವ 25 ದಿನಗಳ ‘ಚಿಣ್ಣರ ಮೇಳ’ಕ್ಕೆ ವನ್ಯಜೀವಿ ತಜ್ಞ ಕೃಪಾಕರ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ವರ್ಣರಂಜಿತ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಜಪಾನ್ ಮತ್ತು ಜರ್ಮನಿ ಸೇರಿ ಯುರೋಪ್ ರಾಷ್ಟ್ರಗಳಲ್ಲಿ 10 ವರ್ಷದ ತನಕ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಇರುವುದಿಲ್ಲ. ಜಪಾನ್‌ನಲ್ಲಿ 2ನೇ ತರಗತಿ ಮಕ್ಕಳಿಗೆ ಸಿಗ್ನಲ್ ಲೈನ್ ಕ್ರಾಸ್ ಮಾಡುವ ಬಗ್ಗೆ ತರಬೇತಿ ಕೊಡಲಾಗುತ್ತದೆ. ಶಾಲೆಯ ಆವರಣ, ಶೌಚಾಲಯ ಶುಚಿ ಮಾಡುವ ಹೊಣೆಗಾರಿಕೆ ಕಲ್ಪಿಸಲಾಗುತ್ತದೆ. ಅವರು ದೇಶಾಭಿಮಾನ ಮತ್ತು ಪ್ರತಿಭೆಯಲ್ಲಿ ನಮಗಿಂತಲೂ ಮುಂದಿದ್ದಾರೆ ಎಂದರು.

ಇತ್ತೀಚಿನ ದಿನಗಳಲ್ಲಿ ಇಡೀ ವ್ಯವಸ್ಥೆ ಶಿಕ್ಷಣ ವ್ಯವಸ್ಥೆಯಲ್ಲಿ ಸಂವೇದನಾಶೀಲತೆ ಕುಸಿಯುತ್ತಿದೆ. ಶಿಕ್ಷಣ ಪದ್ಧತಿ ಕೂಲಿ ಕೆಲಸ ಆಗುತ್ತಿದೆ. ಕಂಪ್ಯೂಟರ್ ಸೈನ್ಸ್ ಡಿಗ್ರಿ ಪಡೆದು ಕೆಲಸ ಹಿಡಿಯುವ ಕಾರ್ಮಿಕರನ್ನು ತಯಾರಿ ಮಾಡುತ್ತಿದ್ದೇವೆ. ಮೊಬೈಲ್ ಬಳಸುವುದನ್ನು ತಮ್ಮ ಮಕ್ಕಳು ಬಹಳ ಬುದ್ಧಿವಂತರೆಂದು ಹೇಳುವ ಪೋಷಕರಿದ್ದಾರೆ. ಬಂಡೀಪುರ, ಮಧುಮಲೈ ಕಾಡಿನಲ್ಲಿ 8 ವರ್ಷದ ಬಾಲಕ ಆನೆಯನ್ನು ನೋಡಿಕೊಳ್ಳುತ್ತಾನೆ, ಅದು ಕೌಶಲ. ಇವತ್ತು ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಕಳೆದು ಹೋಗುತ್ತಿದ್ದಾರೆ. ಶಾಲೆಯಲ್ಲಿ ಕಲಿಯಬೇಕಾದ್ದು ಕಲಿಯಲಾಗುತ್ತಿಲ್ಲ. ಬಾಲ್ಯದಲ್ಲಿ ಮಕ್ಕಳ ಕಲಿಕೆಯ ಪ್ರಕ್ರಿಯೆ ವ್ಯರ್ಥ ಅನಿಸುತ್ತದೆ ಎಂದು ಹೇಳಿದರು.

ರಂಗ ಸಮಾಜದ ಸದಸ್ಯ ಸುರೇಶ್ ಬಾಬು ಮಾತನಾಡಿ, ಮಾನಸಿಕ ಖಿನ್ನತೆಗೆ ಓಳಗಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಳ ಆತಂಕಕಾರಿಯಾಗಿದೆ. ಬೇಸಿಗೆ ಶಿಬಿರಗಳು ಮಕ್ಕಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ ಎಂದು ತಿಳಿಸಿದರು.

ಪರಿಸರ ತಜ್ಞ ಕೆ ಮನು ಮಾತನಾಡಿ, ಅಂಬೇಡ್ಕರ್ ಕೊಟ್ಟ ಪ್ರಜಾಪ್ರಭುತ್ವ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿಲ್ಲ. ಪರಿಸರ ಸಂಪನ್ಮೂಲವೂ ಖಾಲಿಯಾಗುತ್ತಿದೆ. ಕೋಟ್ಯಂತರ ಜೀವಿಗಳಿಗೂ ಇರುವ ಭೂಮಿಯನ್ನು ಸಂರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ದಿನದಂದು ಬೇಸಿಗೆ ಶಿಬಿರ ಪ್ರಾರಂಭವಾಗುತ್ತಿರುವುದು ನಿಜಕ್ಕೂ ಈ ಕಾರ್ಯಕ್ರಮಕ್ಕೆ ವಿಶೇಷವನ್ನುಉಂಟುಮಾಡಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕು. ಇದು ನಾಲ್ಕು ಗೋಡೆಗಳ ನಡುವೆ ಸಿಗುವುದಿಲ್ಲ. ಆಟ, ಪಾಠ, ಕತೆ, ಗುಂಪು ಚಟುವಟಿಕೆಗಳಿಗೆ ಮೂಲಕ ಪರಸ್ಪರ ಬೆರೆತಾಗ ಪ್ರೀತಿ, ವಿಶ್ವಾಸ, ತಾಳ್ಮೆ, ಎಲ್ಲರನ್ನೂ ಗೌರವಿಸುವ ಗುಣ ಇನ್ನಿತರ ಮೌಲ್ಯಗಳನ್ನು ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಡಾ.ಎಂ.ಎ.ಜಾಹಿದಾ, ಶಿಬಿರದ ನಿರ್ದೇಶಕ ಅನಿಲ ರೇವೂರ, ರಂಗ ಸಮಾಜದ ಸದಸ್ಯ ಸುರೇಶ್ ಬಾಬು, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ, ರಂಗಾಯಣ ಉಪ ನಿರ್ದೇಶಕ ಡಾ ಎಂ.ಡಿ.ಸುದರ್ಶನ್, ಸೋನಹಳ್ಳಿ ಹಾಡಿ ಹಾಗೂ ಹಿರೇಹಳ್ಳಿ ಹಾಡಿಯ ಮಕ್ಕಳು ಭಾಗಿಯಾಗಿದ್ದರು.

Tags:
error: Content is protected !!