ಮೈಸೂರು : ಧಾರಕಾರ ಮಳೆ ಸುರಿದಾಗಲೆಲ್ಲ ನಗರದ ತಗ್ಗು ಪ್ರದೇಶದ ಜನತೆಗೆ ಎಲ್ಲಿಲ್ಲದ ಆತಂಕ. ನೀರು ಮನೆಗೆ ನುಗ್ಗಿ ಮಾಡುವ ಅವಾಂತರ ಒಂದೆಡೆಯಾದರೆ, ಮತ್ತೊಂದೆಡೆ ಯುಜಿಡಿ ಲೈನ್‌ಗಳು ಬ್ಲಾಕ್ ಆಗಿ ರಸ್ತೆ ಮೇಲೆ ಕಲುಷಿತ ನೀರು ಹರಿಯುವುದರಿಂದ ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ.
ನಗರದ ಚಾಮರಾಜ ಜೋಡಿಯ ಸುತ್ತಮುತ್ತ ಮಂಗಳವಾರ ಸಂಜೆ ಮತ್ತು ರಾತ್ರಿ ಬಿರುಸಿನ ಮಳೆ ಆಗಿರುವುದರಿಂದ ಯುಜಿಡಿ ಲೈನ್ ಬ್ಲಾಕ್ ಆಗಿ ರಸ್ತೆ ಮೇಲೆ ಕಲುಷಿತ ನೀರು ಹರಿಯುತ್ತಿದೆ. ಇದರಿಂದ ಈ ಭಾಗದ ಜನರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ರಸ್ತೆಯ ಮೇಲ್ಭಾಗದಲ್ಲೇ ಉಕ್ಕಿ ಹರಿವ ಮಲ ಮೂತ್ರ ಮಿಶ್ರಿತ ನೀರಿನಿಂದ ಸಾರ್ವಜನಿಕರ ವಾಹನ ಸಂಚಾರಕ್ಕೂ ಅಡಚಣೆಯುಂಟಾಗಿದೆ. ಯುಜಿಡಿ ಲೈನ್ ಕಾಮಗಾರಿಗಾಗಿ ಚೆನ್ನಾಗಿರುವ ರಸ್ತೆ ಹಗೆದು ಹಾಳು ಮಾಡಿರುವ ಪಾಲಿಕೆಯಿಂದಲೇ ಇಂತಹ ಸಮಸ್ಯೆ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ಬೇಸಿಗೆ ಸಂಧರ್ಭದಲ್ಲಿ ಯುಜಿಡಿ ಕಾಮಗಾರಿಗಳ ಮುಗಿಸದೇ ಮಳೆಗಾಲದ ಸಂದರ್ಭದಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿರುವ ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯುಂಟಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಸೂಕ್ತ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸಿ ಸಾರ್ವಜನಿಕ ಸಮಸ್ಯೆ ಸರಿಪಡಿಸಲಿ ಎನ್ನುವುದು ನಮ್ಮ ಆಶಯವಾಗಿದೆ.





