ಮೈಸೂರು: ಆರು ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಸಿದ್ದರಾಮಯ್ಯ ಅವರೇ ಗ್ಯಾರಂಟಿ ಇಲ್ಲ. ಇನ್ನು ಕೇಂದ್ರ ಸರ್ಕಾರಕ್ಕೆ ಅವರೇನು ಮಾರ್ಕ್ಸ್ ಕೊಡುವುದು. ಗ್ಯಾರಂಟಿ ಇಲ್ಲದವರು ಕೊಡುವ ಅಂಕಕ್ಕೆ ಬೆಲೆಯೇ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಎರಡು ವರ್ಷಗಳ ಸಾಧನೆಗೆ ನಾವು ಶೂನ್ಯ ಅಂಕ ನೀಡಬಹುದಷ್ಟೇ. ಅವರಿಗೆ ಶೂನ್ಯ ಕೊಡುವುದೂ ವೇಷ್ಟು. ನಾವು ಅವರಿಂದ ಯಾವುದೇ ಅಂಕ ನಿರೀಕ್ಷೆ ಮಾಡಿಲ್ಲ. ಗ್ಯಾರಂಟಿ ನೀಡಿದ ಸಿದ್ದರಾಮಯ್ಯ ಅವರೇ ಗ್ಯಾರಂಟಿ ಇಲ್ಲ ಎನ್ನುವುದು ಗೊತ್ತಾಗಿದೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಗೃಹ ಸಚಿವರು ಅವರ ಗೃಹಕ್ಕೆ ಮಾತ್ರ ಸಚಿವರಾಗಿದ್ದಾರೆ. ಮೈಸೂರಿಗೆ ಸಿಎಂ ಮತ್ತು ಅವರ ಮಗ ಬೇಲಿ ಹಾಕಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಕನಕಪುರ, ಬೆಂಗಳೂರು ಸುತ್ತಮುತ್ತ ಬೇಲಿ ಹಾಕಿಕೊಂಡರೆ, ಉತ್ತರ ಕರ್ನಾಟಕ ಭಾಗದಲ್ಲಿ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಬೆಳಗಾವಿಗೆ, ಕಲ್ಬುರ್ಗಿಯಲ್ಲಿ ಕೇಳುವಂತೆಯೇ ಇಲ್ಲ ಅದೊಂದು ರಾಜ್ಯ ಮಾಡಿಕೊಂಡಿದ್ದಾರೆ. ಇನ್ನೆಲ್ಲಿಗೆ ಪರಮೇಶ್ವರ್ ಗೃಹ ಸಚಿವರು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಏನೆಲ್ಲಾ ಮಾಡಿದ್ದಾರೆ ಹೇಳಲಿ. ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸಿದ್ದಾರಾ? ಕೆಆರ್‌ಎಸ್ ನಾಲೆಗಳ ಹೂಳು ತೆಗೆಸಿದ್ದಾರಾ? ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರಮೋದಿ ಅವರು ಸುದ್ದಿಗೋಷ್ಠಿಯನ್ನೇ ನಡೆಸುವುದಿಲ್ಲ ಎಂದರೆ ಏನರ್ಥ. ಅವರು ಕೆಲಸ ಮಾಡಿ, ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಸಿದ್ದರಾಮಯ್ಯ ಅವರಂತೆ ಸುದ್ದಿಗೋಷ್ಠಿ ಮಾಡಿ ಕಾಲ್ತುಳಿತಕ್ಕೆ ಕಾರಣ ನಾನಲ್ಲ, ನಾನವನಲ್ಲ ಎನ್ನಬೇಕೆ? ೨ಕೆಜಿ, ಕಲ್ಲಿದ್ದಲು ಮುಂತಾದ ಯಾವ ಹಗರಣವಾಗಿದೆ ಎಂದು ಸುದ್ದಿಗೋಷ್ಠಿ ಕರೆಯಬೇಕು? ತಮ್ಮ ತಪ್ಪು ಮುಚ್ಚಿಕೊಳ್ಳಲು ಪತ್ರಿಕಾಗೋಷ್ಠಿ ಕರೆದರೆ, ಮೋದಿ ಅವರು ಕಾರ್ಯಕ್ರಮಗಳ ಮೂಲಕ ಜನರಿಗೆ ಗೊತ್ತು ಮಾಡುತ್ತಾರೆ ಎಂದರು.
ಸಿಎಂ ಕುರ್ಚಿ ಎಲ್ಲಿ ಗಟ್ಟಿಯಾಗಿದೆ? ಯಾವುದೇ ಆಂತಕವಿಲ್ಲ ಎಂದು ಹೇಗೆ ಹೇಳುತ್ತಾರೆ? ಡಾ.ಜಿ. ಪರಮೇಶ್ವರ್ ನಾನೂ ಸಿಎಂ ಆಗುತ್ತೇನೆ ಎನ್ನುತ್ತಾರೆ. ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಗೆ ಟವೆಲ್ ಸುತ್ತಿಕೊಂಡಿದ್ದಾರೆ. ಜಾರಕಿಹೊಳಿ ನಾನೂ ಆಗಬಹುದು ಎನ್ನುತ್ತಾರೆ. ಮತ್ತೊಂದು ಕಡೆ ಎಂ.ಬಿ. ಪಾಟೀಲ್ ನಾನು ಒಂದು ಕೈ ನೋಡುವೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿಎಂ ಆಗುವವರ ದೊಡ್ಡ ಪಟ್ಟಿಯೇ ಇದೆ. ಕಾರ್ಖಾನೆಗಳ ಮುಂದೆ ಕೆಲಸ ಖಾಲಿ ಇದೆ ಎಂದು ಬೋರ್ಡ್ ಹಾಕುವಂತೆ ಸಿಎಂ ಹುದ್ದೆ ಖಾಲಿ ಇದೆ ಎಂಬಂತಾಗಿದೆ. ಎಲ್ಲರೂ ಅರ್ಜಿ ಹಾಕುತ್ತಿದ್ದಾರೆ ಎಂದು ಅವರು ಹೇಳಿದರು.





