ಮೈಸೂರು: ಕೊಲೆ ಪ್ರಕರಣದ ಆರೋಪ ಹೊರೆಸಿ ನಿರಪರಾಧಿಗೆ ಶಿಕ್ಷೆ ಅನುಭವಿಸಿದ ಆದಿವಾಸಿ ಸುರೇಶ್‌ಗೆ ಪರಿಹಾರ ನೀಡಿ ಪುನರ್ ವಸತಿ ಕಲ್ಪಿಸುವುದರ ಜೊತೆಗೆ ತನಿಖಾಧಿಕಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.
ನೂರು ಅಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಯು ಶಿಕ್ಷೆ ಅನುಭವಿಸಬಾರದು ಎನ್ನುವುದು ಭಾರತದ ನ್ಯಾಯಾಂಗದ ಘೋಷವಾಕ್ಯ. ಆದರೆ, ಹಣಬಲ, ರಾಜಕೀಯ ಬಲ, ಜಾತಿ ಬಲ ಇರುವ ಅಪರಾಧಿಗಳನ್ನು ಕಾನೂನಿನ ಕುಣಿಕೆಯಿಂದ ಪಾರು ಮಾಡಿ ರಕ್ಷಣೆ ನೀಡುತ್ತಿರುವ ಅನಾಗರಿಕ ವ್ಯವಸ್ಥೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಕೊಡಗಿನ ಕುಶಾಲನಗರ ತಾಲ್ಲೂಕು ಬಸವನಹಳ್ಳಿ ಆದಿವಾಸಿ ಸಮುದಾಯದ ಸುರೇಶ್ ಪ್ರಕರಣ ಜೀವಂತ ಸಾಕ್ಷಿಯಾಗಿದೆ.
ಬಂಡವಾಳ ಶಾಹಿಗಳ ಹಿಡಿತದಿಂದ ಭ್ರಷ್ಟಗೊಂಡಿರುವ ರಾಜಕೀಯ ಮತ್ತು ಅಧಿಕಾರಿಗಳು ಧರ್ಮಸ್ಥಳ ಸೌಜನ್ಯ ಪ್ರಕರಣದಲ್ಲಿ ಅಮಾಯಕ ಸಂತೋಷ್ ರಾವ್ ನನ್ನು ಬಲಿಪಶು ಮಾಡಿದ ಮಾದರಿಯಲ್ಲಿ ಸಾಕ್ಷಿಗಳನ್ನು ನಾಶ ಮಾಡಲು ಆದಿವಾಸಿ ಸಮುದಾಯದ ಸುರೇಶ ಅವರನ್ನು ಬಲಿಪಶು ಮಾಡಲಾಗಿದೆ.
ಕೊಲೆ ಅತ್ಯಾಚಾರ ಪ್ರಕರಣದಲ್ಲಿ ಸಂತೋಷ್ ರಾವ್ ೧೪ ವರ್ಷ ಶಿಕ್ಷೆ ಅನುಭವಿಸಿದರೇ ಸುರೇಶ್ ೨ ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಎರಡು ಪ್ರಕರಣದಲ್ಲೂ ತನಿಖಾಧಿಕಾರಿಗಳು ಕರ್ತವ್ಯ ಲೋಪ ಎದ್ದು ಕಾಣುತ್ತಿದೆ. ಯಾರದೋ ಮರ್ಜಿಗೊಳಗಾಗಿ ಇಂತಹ ಅಮಾಯಕರನ್ನು ಶಿಕ್ಷೆಗೆ ಗುರಿಪಡಿಸಿ ಸಾಕ್ಷಿ ನಾಶಮಾಡುವ ಅಧಿಕಾರಗಳನ್ನೆ ಅಪರಾಧಿಗಳೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದೆ.
ಯಾವುದೇ ಅಪರಾಧ ಮಾಡದಿದ್ದರೂ ಜೈಲು ಶಿಕ್ಷೆ ಅನುಭವಿಸಿ ಬದುಕು ಕಳೆದುಕೊಂಡಿರುವ ಸುರೇಶ್ ಮತ್ತು ಸಂತೋಷ್ ಕುಟುಂಬಗಳಿಗೆ ಪರಿಹಾರ ನೀಡಿ ಪುನರ್ ವಸತಿ ಕಲ್ಪಿಸಬೇಕು. ಈ ಪ್ರಕರಣವನ್ನು ಮರು ತನಿಖೆ ನಡೆಸಿ ಆರೋಪಿ ಜೊತೆ ತನಿಖಾಧಿಕಾರಿಗಳಿಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಜಿಲ್ಲಾ ಸಂಘಟನಾ ಸಂಚಾಲಕ ಶಂಭುಲಿಂಗಸ್ವಾಮಿ ಆಗ್ರಹಿಸಿದ್ದಾರೆ.