ಎಚ್.ಡಿ.ಕೋಟೆ : ಒಕ್ಕಲಿಗ ಸಮುದಾಯ ಮತ್ತು ಮುಖಂಡರ ಬಗ್ಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ಕಾಂಗ್ರೆಸ್ ಮುಖಂಡ, ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೀಚನಹಳ್ಳಿ ಸೀತಾರಾಮ್ ಅವರನ್ನು ಮೈಸೂರು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದರು.
ತಾಲ್ಲೂಕು ಒಕ್ಕಲಿಗರ ಸಮುದಾಯದ ವತಿಯಿಂದ ಪಟ್ಟಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೀತಾರಾಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಅವರು ಅಕ್ರಮವಾಗಿ ಕಬಳಿಸಲು ಮುಂದಾಗಿರುವ ಕಬಿನಿ ಜಲಾಶಯದ ಸಮೀಪದಲ್ಲಿರುವ ಜಮೀನನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ನಾಡಪ್ರಭು ಕೆಂಪೇಗೌಡ, ನಾಡಗೀತೆ ರಚಿಸಿದ ರಾಷ್ಟ್ರಕವಿ ಕುವೆಂಪು, ರೈತರ ಭೂಮಿಗಳಿಗೆ ನೀರು ಒದಗಿಸಲು ಶ್ರಮಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿದ ಎಸ್.ಎಂ. ಕೃಷ್ಣ ಒಕ್ಕಲಿಗ ಸಮುದಾಯ ಮತ್ತು ಸಮುದಾಯದ ಮುಖಂಡರುಗಳ ಬಗ್ಗೆ ಜಿ.ವಿ.ಸೀತಾರಾಮ್ ಅವಹೇಳನಕಾರಿಯಾಗಿ ಮಾತನಾಡಿರುವುದು ಒಕ್ಕಲಿಗರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ. ದೇಶದ ಬೆನ್ನೆಲುಬುಬಾಗಿ ಒಕ್ಕಲುತನ ಮಾಡಿ ರೈತಾಪಿ ವರ್ಗದ ಮೂಲಕ ಗುರುತಿಸಿಕೊಂಡು ತಮ್ಮ ಪಾಡಿಗೆ ಜೀವನ ನಡೆಸುತ್ತಿರುವ ಒಕ್ಕಲಿಗ ಸಮುದಾಯದ ಬಗ್ಗೆ ಹಗುರವವಾಗಿ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಒಂದು ಸಮುದಾಯ ಹಾಗೂ ಮುಖಂಡರ ಬಗ್ಗೆ ಮಾತನಾಡಬೇಕಾದರೆ ಪರಿಜ್ಞಾನ ಇಟ್ಟುಕೊಂಡು ಮಾತನಾಡಬೇಕು. ತಾಲ್ಲೂಕಿಗೆ ಸೀತಾರಾಮ್ ಬಂದರೆ ಆತನನ್ನು ತಾಲ್ಲೂಕಿನಿಂದ ಹೊರಗೆ ಕಳುಹಿಸುವವರೆಗೂ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಪಟ್ಟಣದ ಗದ್ದಿಗೆ ಸರ್ಕಲ್‌ನಿಂದ ತಾಲ್ಲೂಕು ಆಡಳಿತ ಕಚೇರಿಯವರೆಗೆ ಸಾವಿರಾರು ಜನರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ, ಜಿ.ವಿ. ಸೀತಾರಾಮ್ ಅವರ ಪ್ರತಿಕೃತಿ ದಹನ ಮಾಡಿದರು. ನಂತರ ತಹಸಿಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.





