ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ ಉಪವಿಭಾಗಾಧಿಕಾರಿ ಕಚೇರಿ ಎದುರು ಮಾರ್ಚ್.1 ರಂದು ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಶೀಘ್ರವೇ ಆರಂಭಿಸಬೇಕೆಂದು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಇಂದು(ಫೆಬ್ರವರಿ.25) ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ರಾಗಿ ಬೆಳೆಯುವವರು ಹಳೇ ಮೈಸೂರು ಭಾಗದವರಾಗಿದ್ದಾರೆ. ಆದರೆ ಈ ಭಾಗದ ರೈತರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ದಲ್ಲಾಳಿಗಳಿಗೆ ಕಡಿಮೆ ದರದಲ್ಲಿ ರಾಗಿ ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ರೈತರು ನಷ್ಟ ಎದುರಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ರೈತರಿಗೆ ಉಪಯೋಗವಾಗುವಂತಹ ಯಾವುದೇ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸುತ್ತಿಲ್ಲ. ಅಲ್ಲದೇ ಭತ್ತ ಖರೀದಿ ಕೇಂದ್ರ, ರಾಗಿ ಮತ್ತು ಮುಸುಕಿನ ಜೋಳಕ್ಕೆ ವೈಜ್ಞಾನಿಕ ದರ ನಿಗಧಿ ಮಾಡಿದ್ದರೂ ಸಹ ಖರೀದಿ ಕೇಂದ್ರ ಸಕಾಲಕ್ಕೆ ಪ್ರಾರಂಭಿಸುವ ಪ್ರಯತ್ನವನ್ನು ಸರ್ಕಾರ ಮಾಡದೇ ವೈಜ್ಞಾನಿಕ ದರ ಇದ್ದರೂ ರೈತರಿಗೆ ಅನುಕೂಲವಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಇನ್ನು ರೈತರ ಬೆಳೆ ದಲ್ಲಾಳಿಗಳ ಪಾಲಾಗುತ್ತಿದ್ದು, ಎಪಿಎಂಸಿ ಇದ್ದರೂ ಕೂಡ ಯಾಔಉದೇ ಅನುಕೂಲವಾಗದೇ ತಮ್ಮ ತಮ್ಮ ಹೊಲಗಳಲ್ಲಿಯೇ ಫಸಲಿನ ದರ ನಿಗಧಿಗೊಳಿಸಿ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಈ ಮೂಲಕ ತಾವು ಬೆಳೆದ ಬೆಳೆಗಳನ್ನು ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಮಾರಾಟ ಮಾಡಿ ಬಂದ ಹಣವನ್ನು ತಮ್ಮ ಕಷ್ಟಗಳಿಗೆ ಬಳಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ರಾಗಿ ಖರೀದಿಸುವ ಕೇಂದ್ರಕ್ಕೆ ಚಾಲನೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.





