ಪೊಲೀಸರ ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳನ್ನು ಬಿಚ್ಚಿಟ್ಟ ಸ್ಥಳೀಯರು
ಮೈಸೂರು: ಗಾಂಜಾ, ಎಂಡಿಎನ್ ಇತರೆ ಮಾದಕ ವಸ್ತುಗಳ ಸೇವನೆಗೆ ಬ್ರೇಕ್ ಹಾಕಿ.., ಬೈಕ್ ವೀಲಿಂಗ್ ತಪ್ಪಿಸಿ.., ರಾತ್ರಿ 10ರ ನಂತರ ಟೀ-ಅಂಗಡಿಗಳಲ್ಲಿ ಪುಂಡರ ಹಾವಳಿ ತಪ್ಪಿಸಿ.., ಮದ್ಯ ವ್ಯಸನಿಗಳ ಕಾಟದಿಂದ ನಮ್ಮನ್ನು ಕಾಪಾಡಿ…
ಇವು ನಗರದ ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿನ ಶಿವಾಜಿ ಪಾರ್ಕ್‌ನಲ್ಲಿ ನಡೆದ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಆರಕ್ಷಕರ ಎದುರು ಕ್ಷೇತ್ರದ ನಿವಾಸಿಗಳು ಅಲವತ್ತು ಕೊಂಡ ಸಮಸ್ಯೆಗಳು.
ಸ್ಮಶಾನ, ಉದ್ಯಾನ, ಖಾಲಿ ಜಾಗಗಳಲ್ಲಿ ಗಾಂಜಾ ಸೇವನೆ, ಎಂಡಿಎನ್ ಮಾದಕ ವಸ್ತು ಸೇರಿದಂತೆ ‘ಎಂ’ ಎಂಬ ಮಾದಕ ಡಗ್ ಸೇವನೆಯ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ದೂರು ಕೊಟ್ಟರೂ ಇದಕ್ಕೆ ಕಡಿವಾಣ ಬಿದ್ದಿಲ್ಲ. ಉದಯಗಿರಿ, ಶಾಂತಿನಗರ, ಬನ್ನಿಮಂಟಪ, ಕಲ್ಯಾಣಗಿರಿ, ಕ್ಯಾತರಮಾರನಹಳ್ಳಿ ಸೇರಿದಂತೆ ಎನ್.ಆರ್.ಕ್ಷೇತ್ರದ ಬಹುತೇಕ ಭಾಗಗಳಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೆಡಿಕಲ್ ಶಾಪ್‌ಗಳಲ್ಲಿ ಎಂಡಿಎನ್ ಮಾತ್ರೆ ಮತ್ತು ಇಂಜೆಕ್ಷನ್ ಅನ್ನು ಯಾವುದೇ ಚೀಟಿ ಇಲ್ಲದೆ ಕೊಡುತ್ತಿದ್ದಾರೆ. ಮೊದಲು ಮೆಡಿಕಲ್ ಶಾಪ್‌ಗಳಿಗೆ ಈ ವಸ್ತು ನೀಡದಂತೆ ಸೂಚನೆ ನೀಡಬೇಕು. ಗಸ್ತು ವ್ಯವಸ್ಥೆಯನ್ನು ಮತ್ತೇ ಆರಂಭಿಸಬೇಕು. ಮನೆ ಮನೆಗಳಿಗೆ ಪೊಲೀಸ್ ವ್ಯವಸ್ಥೆ ಬಲಪಡಿಸಬೇಕು ಕೋರಿಕೊಂಡರು.
ನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್ ಕುಮಾರ್ ಮಾತನಾಡಿ, ಎನ್.ಆರ್. ಕ್ಷೇತ್ರದಲ್ಲಿ ಟ್ರಾಫಿಕ್ ಸಮಸ್ಯೆ ಹೇಳತೀರದಾಗಿದೆ. ಶಿವಾಜಿ ರಸ್ತೆ ಹೆದ್ದಾರಿ ಸಂಪರ್ಕಿಸುವ ರಸ್ತೆ, ಮಾಲ್, ಆಸ್ಪತ್ರೆ, ಕಲ್ಯಾಣ ಮಂಟಪ, ದೇವಸ್ಥಾನ, ಚರ್ಚ್‌ಗಳಿವೆ. ಆದರೆ, ಇಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ರಸ್ತೆ ಬದಿಯಲ್ಲೇ ನಿಲ್ಲಿಸಬೇಕು. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
9ನೇ ವಾರ್ಡ್ ನಿವಾಸಿ ಇರ್ಫಾನ್ ಪಾಷಾ ಮಾತನಾಡಿ, 20 ರೂ.ನ ‘ಎಂ’ ಇಜೆಂಕ್ಷನ್ ಅನ್ನು 120 ರೂ.ಗೆ ಮೆಡಿಕಲ್‌ನಲ್ಲಿ ಕೇಳಿ ಕೇಳಿದವರಿಗೆ ನೀಡುತ್ತಿದ್ದಾರೆ. ಮೊದಲು ಮೆಡಿಕಲ್ ಶಾಪ್ ಮಾಲೀಕರೊಂದಿಗೆ ಸಭೆ ನಡೆಸಿ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದರು.
ಎನ್.ಆರ್.ಠಾಣೆಯಲ್ಲಿ 11 ಗಂಟೆವರೆಗೂ ಟೀ ಅಂಗಡಿ ತೆರೆದಿರಲಿದೆ. ತೆರೆದಿರಲಿದೆ. ಇವುಗಳನ್ನು 10ರೊಳಗೆ ಮುಚ್ಚಲು ಸೂಚನೆ ನೀಡಬೇಕು. ದಲಿತರು, ಮುಸ್ಲಿಮರು ಹೆಚ್ಚು ವಾಸವಿರುವ ಈ ಪ್ರದೇಶದಲ್ಲಿ ಹೊಸ ಮದ್ಯದ ಅಂಗಡಿಗಳನ್ನು ತೆರೆಯಬಾರದು. ಈಗಿರುವ ಕೆಲವನ್ನು ಮುಚ್ಚಬೇಕು ಎಂದು ದಲಿತಮುಖಂಡರೊಬ್ಬರು ಮನವಿ ಮಾಡಿದರು.
ಸುಮಾರು ಒಂದು ತಾಸು ದೂರುಗಳನ್ನು ಆಲಿಸಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು, ಗಾಂಜಾ, ಇತರೆ ಮಾದಕ ವಸ್ತು ಸೇವನೆ, ನಾಗರಿಕರಿಗೆ ತೊಂದರೆ ನೀಡುವವರ ವಿರುದ್ಧ ಪೊಲೀಸ್ ಇಲಾಖೆ ದೂರು ನೀಡಬೇಕು. ನಿಮ್ಮ ಹೆಸರು ಸೇರಿ ಎಲ್ಲ ಮಾಹಿತಿಗಳನ್ನು ಗೌಪ್ಯವಾಗಿ ಇರಿಸುತ್ತೇವೆ ಎಂದರು.
ಗಾಂಜಾ ಸೇವನೆ ಮತ್ತು ವೀಲಿಂಗ್, ಬ್ಯಾಂಗಿಂಗ್ ಮಾಡುವ ಪುಂಡಾರ ಬಗ್ಗೆ ನಮಗೆ ಮಾಹಿತಿ ಕೊಡಿ, ಏಕೆಂದರೆ ಎಲ್ಲ ಮಾಹಿತಿಗಳು ಪೊಲೀಸ್ ಇಲಾಖೆಗೆ ತಿಳಿಯುವುದಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ. ಪ್ರತಿಯೊಬ್ಬರೂ ನಿಮ್ಮ ಠಾಣಾ ವ್ಯಾಪ್ತಿಯ ಇನ್‌ಸ್ಪೆಕ್ಟರ್ ದೂರವಾಣಿ ಸಂಖ್ಯೆ ಇಟ್ಟುಕೊಂಡಿರಬೇಕು. ಏನೇ ಅಪರಾಧ ಕೃತ್ಯಗಳು ನಡೆದರೂ ಮಾಹಿತಿ ನೀಡಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ‘ಮನೆ ಮನೆಗೂ ಪೊಲೀಸ್ ಯೋಜನೆಯ ಪೊಲೀಸ್ ಅಧಿಕಾರಿ ದೂರವಾಣಿ ಸಂಖ್ಯೆ, ಬೀಟ್ ಪೊಲೀಸರ ದೂರವಾಣಿ ಸಂಖ್ಯೆ ಒಳಗೊಂಡ ಪೋಸ್ಟ ಬಿಡುಗಡೆ ಮಾಡಲಾಯಿತು.
ಕುರಿ ವ್ಯಾಪಾರಕ್ಕೆ ಅನುವು ಮಾಡಿಕೊಡಿ ಮುಂದಿನ ತಿಂಗಳು ಬಕ್ರೀದ್ ಹಬ್ಬದ ಇದೆ. ಹೀಗಾಗಿ ನಗರದ ಎಲ್‌ಐಸಿ ವೃತ್ತದಲ್ಲಿ ಕುರಿ ವ್ಯಾಪಾರದಿಂದ ಟ್ರಾಫಿಕ್ ಸಮಸ್ಯೆ ಆಗಲಿದೆ. ಸುಗಮ ಸಂಚಾರದ ದೃಷ್ಟಿಯಿಂದ ಕುರಿ ವ್ಯಾಪಾರ ಪರ್ಯಾಯ ಸ್ಥಳವನ್ನು ನಿಗದಿಪಡಿಸಬೇಕು. ಬಕ್ರೀದ್ ಬನ್ನಿಮಂಟಪದಲ್ಲಿ ಅವಕಾಶ ಮಾಡಿಕೊಡಬೇಕು. ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತದೆ. ಕುರಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೈಯದ್ ಇಟ್ಬಾಲ್ ಮನವಿ ಮಾಡಿದರು.
ರೇಡಿಯಂ ಲೈಟ್ ಅಳವಡಿಸಿ ಗಾಂಧಿನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತಕ್ಕೆ ರೇಡಿಯಂ ಲೈಟ್ ಅಳವಡಿಸಬೇಕು ಎಂದು ಗಾಂಧಿನಗರದ ಶರತ್ ಮನವಿ ಮಾಡಿದರು.
ಶಿವಾಜಿ ರಸ್ತೆಯ 5 ಮುಖ್ಯ ರಸ್ತೆಯಲ್ಲಿ ವಾಸವಿದ್ದು, ನಮ್ಮ ಮನೆ ರಸ್ತೆಯಲ್ಲಿ ಒಂದು ತಿರುವಿನಲ್ಲಿ ಗಲ್ಲಿ ಇದೆ. ಇಲ್ಲಿ ಗಾಂಜಾ, ಎಂ ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ಹಿರಿಯರು ಇಲ್ಲಿಂದು ಹೋಗುವಂತೆ ಹೇಳಿದರೇ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ. ಬೈಕ್ ಗಳಲ್ಲಿ ವೀಲಿಂಗ್ ಮಾಡುತ್ತಾರೆ. ಇದಕ್ಕೆ
ಕಡಿವಾಣ ಹಾಕಬೇಕು. – ನಿರ್ಮಲಾ, ಸ್ಥಳೀಯ ನಿವಾಸಿ
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ. ಮುತ್ತುರಾಜ್, ಎಸಿಪಿಗಳಾದ ಶಿವಶಂಕರ್, ಅಶ್ವತ್ ನಾರಾಯಣ, ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀಕಾಂತ ತಳವಾರ್, ನಾಗೇಶ್ ಇನ್ನಿತರರು ಹಾಜರಿದ್ದರು.





