ಮೈಸೂರು: ಕರ್ನಾಟಕ ಇಎಸ್‌ಡಿಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಂಸ್ ಡಿಸೈನ್ ಮತ್ತು ತಯಾರಿಕೆ) ವಲಯದಲ್ಲಿ ಕರ್ನಾಟಕವನ್ನು ಜಾಗತಿಕ ನಾಯಕನನ್ನಾಗಿಸುವ ಗುರಿ ಹೊಂದಲಾಗಿದ್ದು, ದೇಶದ ಮೊದಲ ಟೆಕ್ ಜಾತ್ರೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು (ಆಗಸ್ಟ್ 6) ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐಇಎಸ್ಎ) ಸಹಯೋಗದಲ್ಲಿ 4ನೆ ಆವೃತ್ತಿ ಅನಾವರಣಗೊಳಿಸುತ್ತಿರುವ ಸಂದರ್ಭದಲ್ಲಿ ನೀಡಿರುವ ಸಂದೇಶದಲ್ಲಿ ಸಚಿವರು ಮೈಸೂರನ್ನು ಉದ್ಯೋಗಶೀಲ ನಗರವನ್ನಾಗಿ ವರ್ಧಿಸಲು ಮಾಹಿತಿ ತಂತ್ರಜ್ಞಾನ ಇಲಾಖೆ ಯೋಜಿಸಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸೆಮಿಕಂಡಕ್ಟರ್, ಎಲಿಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ ಮತ್ತು ಘಟಕ ಗೋದಾಮುಗಳು ಸೇರಿದಂತೆ 20ಕ್ಕೂ ಹೆಚ್ಚು ಇಎಸ್‌ಡಿಎಂ ಕಂಪನಿಗಳು ಕ್ಲಸ್ಟರ್‌ಗೆ ಸೇರ್ಪಡೆಗೊಳ್ಳುತ್ತಿದ್ದು ಸುಮಾರು 600ಕೋಟಿ ರೂ.ಗಳ ಹೊಸ ಹೂಡಿಕೆ ಹರಿದು ಬಂದಿದೆ. ವಿಶ್ವ ಮಟ್ಟದಲ್ಲಿ ಹೂಡಿಕೆಗಳ ಹರಿವು ಹೆಚ್ಚಿಸುವುದು, ಹೊಸ ಉದ್ಯಮಗಳನ್ನು ಆರಂಭಿಸಲು ಉತ್ತೇಜನ ನೀಡುವುದು ಮತ್ತು ರಾಜ್ಯದಲ್ಲಿ ಪ್ರಾರಂಭಿಸಿರುವ ಉದ್ಯಮಗಳನ್ನು ಉಳಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿಸುವುದು ಕರ್ನಾಟಕ ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಹೆಚ್ಚುವರಿಯಾಗಿ, 150 ಎಕರೆಗಳಷ್ಟು ಪಿಸಿಬಿ ಕ್ಲಸ್ಟರ್ ಅನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಸ್ತುತ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್ ಅನ್ನು ಸೇರಿಸಲು ಉದ್ದೇಶಿಸಿದ್ದೇವೆ. ಇದು 5000 ಹೊಸ ಉದ್ಯೋಗಗಳಿಗೆ ಚಾಲನೆ ನೀಡಲಿದೆ, ಅಷ್ಟೇ ಅಲ್ಲದೆ, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಸಹಕಾರವಾಗಲಿದೆ, ಈ ಎಲ್ಲಾ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಏಕ್‌ರೂಪ್ ಕೌರ್ ಮಾತನಾಡಿ, ಜಾಗತಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜೊತೆ ಕೈ ಜೋಡಿಸಿರುವುದು ಮೈಸೂರು-ಬೆಂಗಳೂರನ್ನು ಸೆಮಿಕಾನ್ ಹಬ್ ಆಗಿ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಮೈಸೂರು ಸೆಮಿಕಾನ್ ತಯಾರಿಕೆ ಕ್ಷೇತ್ರದಲ್ಲಿ ಹಾಗೂ ಬೆಂಗಳೂರು ಸೆಮಿಕಾನ್ ವಿನ್ಯಾಸ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆಯಲಿವೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ, ದೇಶಿಯ ಹಾಗೂ ಮೈಸೂರಿನ ಹಲವಾರು ಕಂಪನಿಗಳ ಪ್ರತಿನಿಧಿಗಳು, ರುಚಿ ಬಿಂದಾಲ್, ಐಎಎಸ್, ಪರಿಣಿಕ ಪವನ್ ರಾಮ್ ಕೆಎಎಸ್, ಕೆಡೆಮ್ ಸಂಸ್ಥೆಯ ಸುಧೀರ್, ಗೌರವ್, ಸಂಜಯ್ ಗುಪ್ತಾ, ಚೇತನ್ ಹಾಗೂ ಮೊದಲಾದವರು ಹಾಜರಿದ್ದರು.